ಅಡುಗೆ ಮನೆ ಬೆಂಕಿ ದುರಂತಕ್ಕೆ ಭಾರತದಲ್ಲಿ ಪ್ರತಿವರ್ಷ ಎಷ್ಟು ಸಾವಿರ ಗೃಹಿಣಿಯರು ಬಲಿಯಾಗುತ್ತಿದ್ದಾರೆ ?

Update: 2016-07-18 07:07 GMT

ಹೊಸದಿಲ್ಲಿ, ಜು.18: ಮಹಿಳೆಯರ ಮೇಲಿನ ಶೋಷಣೆ ಹಾಗೂ ದೌರ್ಜನ್ಯ ಪ್ರಕರಣಗಳು ಪ್ರತಿದಿನವೆಂಬಂತೆ ಸುದ್ದಿಯಾಗುತ್ತಿವೆ. ದೇಶದಲ್ಲಿ ಕಳೆದ ವರ್ಷ 45,000 ಮಂದಿ ಮಹಿಳೆಯರು ಹೆರಿಗೆ ವೇಳೆ ಸಾವನ್ನಪ್ಪಿದ್ದರೆ, ಗರ್ಭಕೋಶ, ಕತ್ತಿನ ಕ್ಯಾನ್ಸರ್ 74,000 ಮಹಿಳೆಯರನ್ನು ಪ್ರತಿ ವರ್ಷ ಬಲಿ ತೆಗೆದುಕೊಳ್ಳುತ್ತಿದೆ. ಅಂತೆಯೇ ಲಭ್ಯ ಅಂಕಿ ಸಂಖ್ಯೆಗಳ ಪ್ರಕಾರ ದೇಶದಲ್ಲಿ 2014 ರಲ್ಲಿ 36,735 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಆದರೆ ಪ್ರತಿ ವರ್ಷ ಅಡುಗೆ ಮನೆಯಲ್ಲುಂಟಾಗುವ ಬೆಂಕಿ ದುರಂತಗಳಿಂದ ಸಾಯುವ 91,000 ಮಹಿಳೆಯರ ವಿಚಾರ ಹೆಚ್ಚು ಸುದ್ದಿಯಾಗುವುದೇ ಇಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಗಂಡನ ಮನೆಯ ಅಡುಗೆ ಕೋಣೆಯಲ್ಲಿ ನಡೆಯುವ ಬೆಂಕಿ ಅವಘಡಗಳಲ್ಲಿಯೇ ಮಹಿಳೆಯರು ಸಾವನ್ನುಪ್ಪುತ್ತಿದ್ದಾರೆ ಹಾಗೂ ಅವರಲ್ಲಿ ಹೆಚ್ಚಿನವರು ಯುವತಿಯರು ಎಂಬುದೂ ತಿಳಿದು ಬರುತ್ತವೆ.

‘ರಿಪ್ರೊಡಕ್ಟಿವ್ ಹೆಲ್ತ್ ಮ್ಯಾಟರ್ಸ್’’ ನಿಯತಕಾಲಿಕದಲ್ಲಿ ಪ್ರಕಟವಾದ ‘‘ಜೆಂಡರ್ಡ್ ಪ್ಯಾಟರ್ನ್ ಆಫ್ ಬರ್ನ್ ಇಂಜ್ಯೂರೀಸ್ ಇನ್ ಇಂಡಿಯಾ : ಎ ನೆಗ್ಲೆಕ್ಟೆಡ್ ಹೆಲ್ತ್ ಇಶ್ಯು’’ ಎಂಬ ಅಧ್ಯಯನಾ ವರದಿಯಲ್ಲಿ ವಿವರಿಸಿದಂತೆ ಸುಟ್ಟ ಗಾಯಗಳಿಂದ ಉಂಟಾಗುವ ಸಾವಿನ ಹೆಚ್ಚಿನ ಪ್ರಕರಣಗಳಲ್ಲಿ ಸಂತ್ರಸ್ತರು 18 ರಿಂದ 35 ರ ಹರೆಯದ ಯುವತಿಯರಾಗಿರುತ್ತಾರೆ. ಮೇಲಾಗಿ 15 ರಿಂದ 44 ಹರೆಯದ ಗುಂಪಿನ ಮಹಿಳೆಯರಲಿ ್ಲಸುಟ್ಟ ಗಾಯಗಳಿಂದುಂಟಾಗುವ ಸಾವು ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದೂ ಈ ವರದಿ ತಿಳಿಸುತ್ತಿದೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರರಾಗಿರುವ ಪದ್ಮಾ ಭಟೆ-ದಿಯೊಸ್ಥಲಿ ಹಾಗೂ ಲಕ್ಷ್ಮಿ ಲಿಂಗಂ ಅವರು ಸಿದ್ಧಪಡಿಸಿರುವ ಈ ವರದಿಯಲ್ಲಿಸುಟ್ಟ ಗಾಯಗಳಿಂದ 1.4 ಲಕ್ಷ ಜನರು ಸಾವಿಗೀಡಾಗಿದ್ದರೆ ಅವರಲ್ಲಿ 91,000 ಮಹಿಳೆಯರಾಗಿದ್ದಾರೆಂದು ಭಾರತ ಸರಕಾರದ ನ್ಯಾಷನಲ್ ಬರ್ನ್ಸ್ ಪ್ರೋಗ್ರಾಮ್ ಮಾಹಿತಿಯಂತೆ ತಿಳಿದು ಬರುತ್ತದೆ ಎಂದು ಅವರು ತಿಳಿಸಿದ್ದಾರೆ. ಯುವತಿಯರು ತಮ್ಮ ಹೆತ್ತವರ ಮನೆಯಲ್ಲಿ ಸುರಕ್ಷಿತವಾಗಿ ಅಡುಗೆ ಮಾಡುತ್ತಿದ್ದರೆ ಪತಿ ಮನೆಯಲ್ಲೇ ಏಕೆ ಸುಟ್ಟ ಗಾಯಗಳಿಗೊಳಗಾಗುತ್ತಾರೆ ಎಂಬ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿಲ್ಲವೆಂದೂ ಈ ವರದಿ ತಿಳಿಸಿದೆ.

ಈ ವಿಚಾರವಾಗಿ ತಾನು ನಡೆಸಿದ ಅಧ್ಯಯನದ ವಿವರಗಳನ್ನು ನೀಡಿದ ಮುಂಬೈನ ಸಯಾನ್ ಆಸ್ಪತ್ರೆಯ ಮಾಜಿ ಮುಖ್ಯ ಶಸ್ತ್ರಚಿಕಿತ್ಸಕಿ ಡಾ. ಮಾಧುರಿ ಗೋರೆ, ತಾವು ಪರಾಮರ್ಶಿಸಿದ ಒಟ್ಟು 200 ಸುಟ್ಟ ಗಾಯ ಪ್ರಕರಣಗಳಲ್ಲಿ 40 ಶೇ. ಪ್ರಕರಣಗಳಲ್ಲಿ ಸಂತ್ರಸ್ತರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಅಥವಾ ಯಾರೋ ಅವರನ್ನು ಕೊಲ್ಲಲು ಯತ್ನಿಸಿದ್ದರು. ಇತರ ಪ್ರಕರಣಗಳು ಆಕಸ್ಮಿಕವೆಂದು ತಿಳಿದು ಬಂದಿತ್ತು. ಆದರೆ ಕೇವಲ 5 ಶೇ. ಪ್ರಕರಣಗಳಲ್ಲಿ ಮಾತ್ರ ಪೊಲೀಸ್ ಕೇಸು ದಾಖಲಿಸಲಾಗಿದೆ ಎಂದು ಅವರು ವಿವರಿಸುತ್ತಾರೆ.

ಇಂತಹ ಬೆಂಕಿ ದುರಂತಗಳನ್ನು ತಡೆಗಟ್ಟುವ ವಿಧಾನದ ಬಗ್ಗೆ ಯಾರೂ ಚಿಂತಿಸಿಯೇ ಇಲ್ಲ. ರಸ್ತೆ ಅಪಘಾತಗಳಂತೆ ಅಡುಗೆ ಮನೆ ಬೆಂಕಿ ದುರಂತ ಪ್ರಕರಣಗಳ ಬಗ್ಗೆ ಯಾರೂ ಕೂಡ ಅಭಿಯಾನ ನಡೆಸಿ ಅಡುಗೆ ಮನೆಯನ್ನು ಸುರಕ್ಷಿತವಾಗಿಸುವ ಬಗ್ಗೆ ಒತ್ತಾಯ ಹೇರಿಲ್ಲವೆಂದು ಆರ್‌ಎಚ್‌ಎಂ ಅಧ್ಯಯನ ವರದಿ ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News