×
Ad

ಯಾರನ್ನೋ ತೆಗಳಲು ಹೋಗಿ ತನ್ನ ಪುತ್ರಿಯನ್ನೇ ಗುರಿಯಾಗಿಸಿದ ಸುಬ್ರಹ್ಮಣ್ಯನ್ ಸ್ವಾಮಿ

Update: 2016-07-18 13:22 IST

ಹೊಸದಿಲ್ಲಿ, ಜು.18: : ಹಿರಿಯ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಹಾಗೂ ಹಿಂದಿನ ಕಾಂಗ್ರೆಸ್ ಸರಕಾರವನ್ನು ಟೀಕಿಸುವ ಯಾವುದೇ ಅವಕಾಶವನ್ನು ಕೈಬಿಡುವುದಿಲ್ಲವೆಂಬುದು ಜನಜನಿತ. ಅಂತೆಯೇ ಕಾಂಗ್ರೆಸ್ ಪಕ್ಷದ ಪರ ಮೃದು ಧೋರಣೆ ಹೊಂದಿರುವ ಕೆಲ ಪತ್ರಕರ್ತರನ್ನೂ ಕಂಡರೆ ಅವರಿಗಾಗದು ಎನ್ನುವುದೂ ರಹಸ್ಯವಲ್ಲ.

ಆದರೆ ರವಿವಾರದಂದು ಯುಪಿಎ ಸರಕಾರದ ಆಡಳಿತದ ಸಂದರ್ಭ ಕೆಲ ಪತ್ರಕರ್ತರ ಸ್ವಜನಪಕ್ಷಪಾತ ನೀತಿಯನ್ನು ಬಹಿರಂಗಗೊಳಿಸಲು ಹೋಗಿ ಅವರು ತಾವೇ ಮುಜುಗರಕ್ಕೀಡಾಗಿರುವುದು ಸೋಜಿಗದ ಸಂಗತಿ.

‘‘ಜರ್ನಲಿಸ್ಟ್ಸ್ ಹೂ ಬಿಕೇಮ್ ಫ್ರೀಕ್ವೆಂಟ್ ಮೀಡಿಯಾ ಡೆಲಿಗೇಟ್ಸ್ ಡ್ಯುರಿಂಗ್ ಪ್ರೈಮ್ ಮಿನಿಸ್ಟರ್ಸ್ ಅಫೀಶಿಯಲ್ ಫಾರಿನ್ ವಿಸಿಟ್ಸ್ ಅಂಡರ್ ಯುಪಿಎ ರಿಜೈಮ್’ ಎಂಬ ಶೀರ್ಷಿಕೆಯಡಿಯಲ್ಲಿ ಜನ್ ಸತ್ಯಾಗ್ರಹ್ ಎಂಬ ವೆಬ್‌ಸೈಟ್ ಪ್ರಕಟಿಸಿದ ಲೇಖನವೊಂದರ ಲಿಂಕ್ ಟ್ವೀಟ್ ಮಾಡಿದ್ದರು ಸ್ವಾಮಿ. ‘‘ಪ್ರಧಾನಿ ವಿದೇಶ ಪ್ರವಾಸದ ಸಂದರ್ಭ ಅವರೊಂದಿಗೆ ಪ್ರಯಾಣಿಸಲು ಅವಕಾಶ ದೊರೆಯುತ್ತಿದ್ದ, ಸರಕಾರಕ್ಕೆ ಹತ್ತಿರವಾಗಿದ್ದ ಸಂಪಾದಕರು ಹಾಗೂ ಪತ್ರಕರ್ತರ ಒಳ್ಳೆಯ ದಿನಗಳು ಮುಗಿದು ಹೋದವು. ಆರ್‌ಟಿಐ ಅರ್ಜಿಗಳ ಮುಖಾಂತರ ಸಂಗ್ರಹಿಸಲಾದ ಮಾಹಿತಿಯಾಧಾರದ ವಿಶೇಷ ವರದಿ ಎಂದು ಆ ವರದಿಯಲ್ಲಿ ತಿಳಿಸಲಾಗಿತ್ತಲ್ಲದೆ, ಅದರಲ್ಲಿ ಹಿಂದಿನ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಅವರೊಂದಿಗೆ ವಿದೇಶ ಪ್ರವಾಸ ಮಾಡಿದ ಪತ್ರಕರ್ತರ ಹೆಸರುಗಳನ್ನು ನೀಡಲಾಗಿತ್ತು.

ಆದರೆ ಆ ಟ್ವೀಟ್‌ನಲ್ಲಿ ಪೋಸ್ಟ್ ಮಾಡಲಾದ ಫೋಟೊ ಒಂದರಲ್ಲಿ ಕಾಣಿಸಿಕೊಂಡವರಲ್ಲಿ ಸ್ವಾಮಿಯ ಪುತ್ರಿ ಸುಹಾಸಿನಿ ಹೈದರ್ ಕೂಡ ಇದ್ದರು. ಹಾಲಿ ದಿ ಹಿಂದೂ ಪತ್ರಿಕೆಗೆ ವರದಿ ಮಾಡುತ್ತಿರುವ ಸುಹಾಸಿನಿ ಈ ಹಿಂದೆ ಸಿಎನ್‌ಎನ್ ಐಬಿಎನ್ ಸುದ್ದಿ ಚಾನಲ್‌ನ ಫಾರಿನ್ ಎಡಿಟರ್ ಆಗಿದ್ದರು. ಸ್ವಾಮಿ ಟ್ವೀಟ್ ಮಾಡಿದ್ದ ಲೇಖನದಲ್ಲಿ ‘‘ಹಿಂದಿನ ಯುಪಿಎ ಸರಕಾರದಲ್ಲಿ ಪ್ರಧಾನಿ, ರಾಷ್ಟ್ರಪತಿ ಹಾಗೂ ವಿದೇಶಾಂಗ ಸಚಿವರೊಂದಿಗೆ ವಿದೇಶ ಪ್ರವಾಸ ಮಾಡಿದ ಹಲವಾರು ಪ್ರಮುಖರಲ್ಲಿ ಸುಹಾಸಿನಿ ಸೇರಿದ್ದರು’’ ಎಂಬ ಅಂಶ ವರದಿಯಾಗಿತ್ತು.

ಟ್ವೀಟ್ ಮಾಡಿದ ಬಳಿಕ ಈ ಬಗ್ಗೆ ಎಚ್ಚೆತ್ತುಕೊಂಡ ಸ್ವಾಮಿ ಇನ್ನೊಂದು ಸ್ಪಷ್ಟೀಕರಣ ಟ್ವೀಟ್ ಮಾಡಿ ‘‘ನಾನು ರಿಟ್ವೀಟ್ ಮಾಡಿದ ಫೊಟೋದಲ್ಲಿ ಸುಹಾಸಿನಿಯ ಫೋಟೊ ಕೂಡ ಇತ್ತು .! ಅವಳು ಯಾರ ಪರವಾಗಿಯೂ ಇಲ್ಲ. ಅವಳನ್ನು ನಾನು ನಿರ್ಭೀತಿಯ ಯುವತಿಯನ್ನಾಗಿ ಬೆಳೆಸಿದ್ದೇನೆ. ಆದುದರಿಂದ ಫೋಟೊ ತಿದ್ದುಪಡಿ ಮಾಡಿಕೊಳ್ಳಿ.’’

ಆದರೆ ಸ್ವಾಮಿ ಸ್ಪಷ್ಟೀಕರಣ ನೀಡಿದಂತೆ ಅವರು ರಿಟ್ವೀಟ್ ಮಾಡಿಲ್ಲ, ಬದಲಾಗಿ ಲೇಖನದ ಲಿಂಕ್‌ನೊಂದಿಗೆ ಹೊಸ ಟ್ವೀಟ್ ಮಾಡಿದ್ದರಷ್ಟೇ. ಸಾಮಾಜಿಕ ಜಾಲ ತಾಣಗಳಲ್ಲಿ ಸ್ವಾಮಿಯ ಈ ಪ್ರಮಾದ ಸಾಕಷ್ಟು ಸುದ್ದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News