ಪ್ರಾಕೃತಿಕ ಸಮತೋಲನ ಕಾಪಾಡಲು ಪ್ರಾಣಿಗಳ ಆರೋಗ್ಯವೂ ಮುಖ್ಯ:ಮುಹಮ್ಮದ್ ಮೋನು
ಉಳ್ಳಾಲ, ಜು.18: ಮಾತು ಆಡಬಲ್ಲ ಮನುಷ್ಯರು ಅಸೌಖ್ಯ ಕಾಡುವಾಗ ವೈದ್ಯರಲ್ಲಿ ಸಮಸ್ಯೆ ಹೇಳಿ ಔಷಧ ಕೇಳಿ ಗುಣಮುಖರಾಗುತ್ತಾರೆ. ಹಾಗೆಯೇ ಪೃಕೃತಿಯ ಸಮತೋಲನವನ್ನು ಕಾಪಾಡಲು ಮೂಕ ಪ್ರಾಣಿಗಳಿಗೂ ಪಶುಚಿಕಿತ್ಸಾಲಯಗಳಲ್ಲಿ ಸಮಯಕ್ಕೆ ತಕ್ಕಂತೆ ಸೂಕ್ತ ಚಿಕಿತ್ಸೆ ದೊರೆಯುವಂತಾ ಗಬೇಕೆಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಹೇಳಿದ್ದಾರೆ.
ದ.ಕ ಜಿಲ್ಲಾಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ತಲಪಾಡಿಯ ಹಿಂದೂ ರುಧ್ರಭೂಮಿ ರಸ್ತೆಯ ಹಳೆಯ ಅಂಗನವಾಡಿ ಕೇಂದ್ರದ ಕಟ್ಟಡದಲ್ಲಿ ಪ್ರದೇಶದ ಜನರ ಬೇಡಿಕೆಯನ್ವಯ ನೂತನವಾಗಿ ಆರಂಭಿಸಲಾದ ತಾತ್ಕಾಲಿಕ ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರದೇಶದ ಜನರ ಬೇಡಿಕೆಯಂತೆ ಸಚಿವ ಯು.ಟಿ ಖಾದರ್‌ರ ಆದೇಶದನ್ವಯ ತಲಪಾಡಿಯಲ್ಲಿ ತುರ್ತಾಗಿ ತಾತ್ಕಾಲಿಕ ಪಶು ಚಿಕಿತ್ಸಾಲಯವನ್ನು ಆರಂಭಿಸಲಾಗಿದೆ. ಸ್ಥಳೀಯ ತಲಪಾಡಿ ಗ್ರಾ.ಪಂ ಮತ್ತು ಹಿಂದೂ ರುದ್ರಭೂಮಿಯ ನಿರ್ವಹಣಾ ಸಮಿತಿಯವರು 10 ಸೆಂಟ್ಸ್ ಜಾಗವನ್ನು ಕಲ್ಪಿಸಿ ಕೊಟ್ಟರೆ 25 ಲಕ್ಷ ರೂ. ಅನುದಾನದಲ್ಲಿ ಈಗಾಗಲೇ ಪಾವೂರು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪಶುಚಿಕಿತ್ಸಾಲಯದ ಮಾದರಿಯಲ್ಲೇ ಇಲ್ಲೂ ಕೂಡ ಸುಸಜ್ಜಿತ ಚಿಕಿತ್ಸಾಲಯವನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದರು.
ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಮಾತನಾಡಿ, ತಲಪಾಡಿ ಗ್ರಾಮ ಸಭೆಯಲ್ಲಿ ತಾತ್ಕಾಲಿಕ ಪಶು ಚಿಕಿತ್ಸಾಲಯ ನಿರ್ಮಾಣದ ಬಗೆಗೆ ಪ್ರಸ್ತಾಪ ಬಂದಾಗ ಅಂದಿನ ತಲಪಾಡಿ ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆ ಸುರೇಖಾ ಚಂದ್ರಹಾಸ್ ಅವರು ಹಳೆಯ ಅಂಗನವಾಡಿ ಕಟ್ಟಡದಲ್ಲಿ ಚಿಕಿತ್ಸಾಲಯ ಪ್ರಾರಂಭಿಸಲು ಪ್ರಯತ್ನಿಸಿದ್ದುದರ ಫಲವಾಗಿ ಯೋಜನೆ ಆರಂಭಿಸುವಂತಾಗಿದೆ. ಹಾಗೆಯೇ ತಲಪಾಡಿ ಪಂಚಾಯತ್‌ಗೆ ಆದಾಯದ ದೃಷ್ಠಿಯಲ್ಲಿ ಇನ್ನೊಂದು ವಾಣಿಜ್ಯ ಕಟ್ಟಡದ ಅಗತ್ಯತೆ ಇದ್ದು ಆದಷ್ಟು ಶೀಘ್ರ ತಾ.ಪಂನಿಂದ ಅನುದಾನ ಕಲ್ಪಿಸುವಂತೆ ಮುಹಮ್ಮದ್ ಮೋನು ಅವರಲ್ಲಿ ವಿನಂತಿಸಿದರು.
ತಾ.ಪಂ. ಸದಸ್ಯರಾದ ಅಬೂಬಕರ್ ಸಿದ್ಧೀಕ್ ಕೊಳಂಗೆರೆ, ಸುರೇಖಾ ಚಂದ್ರಹಾಸ್, ತಲಪಾಡಿ ಗ್ರಾ.ಪಂ. ಉಪಾಧ್ಯಕ್ಷೆ ಜಯಲಕ್ಷ್ಮೀ ಟಿ., ಸದಸ್ಯರಾದ ವಿನಯ ಕುಮಾರ್, ಮಂಗಳೂರು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜಣ್ಣ, ಪಶು ವೈದ್ಯಾಧಿಕಾರಿ ನಾಗರಾಜ್, ಹಿರಿಯ ಪಶು ವೈದ್ಯ ಪರೀಕ್ಷಕ ಚಂದ್ರಹಾಸ್, ತಲಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ಉಪಸ್ಥಿತರಿದ್ದರು.