ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ವಿರೋಧಿಸಿ ಪ್ರತಿಭಟನೆ

Update: 2016-07-18 11:51 GMT

ಕಡಬ, ಜು.18. ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ  ಅನುಷ್ಠಾನವನ್ನು ವಿರೋಧಿಸಿ ಕಡಬ ಶ್ರೀರಾಮ ಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ಬಳಿಕ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಲಿಂಗಯ್ಯ, ತಮ್ಮ ಮನವಿಯನ್ನು ವಿಭಾಗಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ಈ ಸಂದರ್ಭ ಶ್ರೀರಾಮ ಸೇನೆಯ ಕಡಬ ತಾಲೂಕು ಅಧ್ಯಕ್ಷ ಗೋಪಾಲ ನಾಕ್ ಮೇಲಿನಮನೆ ಮಾತನಾಡಿ, ನಮ್ಮ ದೇಶವು ಸಂಸ್ಕಾರಯುತ ಸಂಸ್ಕೃತಿಯೊಂದಿಗೆ ಬೆಳೆದು ಬಂದಿದ್ದು ಸಾವಿರಾರು ವರ್ಷಗಳಿಂದ ಗುರುಹಿರಿಯರಿಂದ ದೈವ, ದೇವರು, ನಂಬಿಕೆಗಳಿಂದ ಬಂದಿದ್ದು ಅದನ್ನು ವೈಜ್ಞಾನಿಕವಾಗಿಯೂ ಅಳವಡಿಸಿಕೊಂಡು ಬರಲಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೇಂದ್ರ ರಾಜ್ಯ ಸರಕಾರಗಳು ಮಹತ್ವ ಯೋಜನೆಗಳಾದ ರೈಲ್ವೆ, ವಿಮಾನ ಕಾಮಗಾರಿ ಇತ್ಯಾದಿಗಳನ್ನು ಪ್ರಾರಂಭಿಸುವಾಗ ಪೂಜೆ ಪುರಸ್ಕಾರಗಳನ್ನು ಮಾಡುತ್ತಾ ಬರುತ್ತಿರುವುದು ದೃಷ್ಟಾಂತವಾಗಿದೆ. ಕರ್ನಾಟಕ ರಾಜ್ಯದಲ್ಲೂ ಇಂತಹದ್ದೆ ನಡೆದುಕೊಂಡು ಬಂದಿರುವಂತಹ ಪರಂಪರೆಯಾಗಿದೆ. ಆದರೆ ಇದರಿಂದಾಗಿ ಯಾವುದೇ ರೀತಿಯ ತೊಂದರೆ ಅನ್ಯಾಯವಾಗಿದೆ ಎಂಬುದು ರಾಜ್ಯದಲ್ಲಿ ನಿದರ್ಶನವಿಲ್ಲ. ಒಂದು ವೇಳೆ ರಾಜ್ಯ ಸರಕಾರ ಅವೈಜ್ಞಾನಿಕವಾಗಿ ಇಂತಹ ಕಾರ್ಯಕ್ರಮಗಳನ್ನು ಮೂಢನಂಬಿಕೆ ಎಂದು ಬಿಂಬಿಸಿ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತಂದಲ್ಲಿ ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗುವುದಲ್ಲದೆ ಇದರಿಂದ ಉಂಟಾಗುವ ಎಲ್ಲಾ ಕಷ್ಟ ನಷ್ಟಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಕಡಬ ತಾಲೂಕು ಸಮಿತಿಯ ಗೌರವಾಧ್ಯಕ್ಷ ವಿಠಲ ರೈ ಗಂಗೋದಕ ಮರ್ದಾಳ, ಸಹಸಂಚಾಲಕ ಅರುಣ್ ರೈ, ಕಡಬ ನಗರ ಅಧ್ಯಕ್ಷ ರೋಹಿತ್ ಪಣೆಮಜಲು, ನಗರ ಸಹಸಂಚಾಲಕ ಗಿರೀಶ್ ರೈ, ಪಿಜಕ್ಕಳ ಗ್ರಾಮ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪಣೆಮಜಲು, ಸಹ ಸಂಚಾಲಕ ಅಚ್ಚುತ ಉಳಿಪು ಗಂಗಾಧರ ಮಜ್ಜಾರು, ಸದಸ್ಯ ಪ್ರಕಾಶ್ ಕೊಲ್ಲೆಸಾಗು, ಯತಿನ್, ಪ್ರದೀಪ್ ರಾವ್, ಚಂದ್ರಶೇಖರ ಕೊಣಾಜೆ, ಜಗ್ಗ ಕಡಬ, ಯೋಗೀಶ್ ಮಡ್ಯಡ್ಕ, ಸುಂದರ ಪೂಜಾರಿ ಕಡಬ ಮೊದಲಾದವರು ಉಪಸ್ಥಿತರಿದ್ದರು.

ಕಡಬ ತಾಲೂಕು ಸಹಸಂಚಾಲಕ ಮೋಹನ ಕೆರೆಕೋಡಿ ಸ್ವಾಗತಿಸಿ ವಂದಿಸಿದರು.

ಕಡಬ ಠಾಣಾ ಸಬ್‌ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News