×
Ad

ಕುಂಪಲ: ‘ಆಟಿದ ಗಮ್ಮತ್ ’ ಗ್ರಾಮೀಣ ಕ್ರೀಡೋತ್ಸವ

Update: 2016-07-18 17:35 IST

ಉಳ್ಳಾಲ, ಜು.18: ಜಿಲ್ಲೆಯಲ್ಲಿ 400 ಸೆಂ.ಮೀ. ಸುರಿಯುತ್ತಿದ್ದ ಮಳೆ ಪ್ರಸಕ್ತ ವರ್ಷದಲ್ಲಿ ಕ್ಷೀಣಿಸಿದೆ. ನಗರಪ್ರದೇಶದಲ್ಲಿನ ಕಾಂಕ್ರೀಟಿಕರಣ ಹಾಗೂ ಪರಿಸರ ನಾಶ ಮಳೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಸಣ್ಣ ತೊರೆಗಳಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಕುರಿತು ಚಿಂತನೆ ನಡೆಸಿದೆ ಎಂದು ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರ, ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿ ಇದರ ಆಶ್ರಯದಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವ ಮತ್ತು ‘ಆಟಿದ ಗಮ್ಮತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯ ಸಂಸ್ಕೃತಿಯನ್ನು ಉಳಿಸಲು ಹಾಗೂ ಬೆಳೆಸಲು ಆಟಿದ ಗಮ್ಮತ್ತ್ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ವಿದೇಶಿಯರು ತುಳುನಾಡಿನ ಕಲೆಯನ್ನು ಮೆಚ್ಚಿ ಅದರ ಕುರಿತು ಅಧ್ಯಯನ ನಡೆಸುವುದರಿಂದ ಕಲೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಂತಹ ಸಂಸ್ಕೃತಿ ಬೇರೆಲ್ಲೂ ಇಲ್ಲ. ಆದರೆ ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸಂಸ್ಕೃತಿ ಉಳಿದಿದೆ. ಇದನ್ನು ಎಲ್ಲಾ ಭಾಗದ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡುವುದರಿಂದ ಕಲೆಗಳನ್ನು ನಡೆಸಿಕೊಂಡು ಹೋಗುವ ಚಿಂತನೆ ಎಲ್ಲರೂ ಮಾಡಬೇಕಿದೆ ಎಂದರು.

ಮಾಜಿ ಕೌನ್ಸಿಲರ್ ಲಕ್ಷ್ಮಣ ಅಬ್ಬಕ್ಕ ನಗರ ಅಧ್ಯಕ್ಷತೆ ವಹಿಸಿದ್ದರು. ಬೋಳಿಯಾರ್ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸತೀಶ್ ಆಚಾರ್ಯ, ಕರ್ಣಾಟಕ ಬ್ಯಾಂಕಿನ ಪ್ರಬಂಧಕ ಸಂದೀಪ್, ಶ್ರೀ ಬಾಲಕೃಷ್ಣ ಮಂದಿರ ಕುಂಪಲದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಕುಂಪಲ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಬಿ.ಜೆ., ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಚಂದ್ರಹಾಸ್, ಕೋಟೆಕಾರು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಅನಿಲ್ ಬಗಂಬಿಲ, ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಹಿರಿಯ ಜಾನಪದ ಕಲಾವಿದೆ ಮುತ್ತಕ್ಕ ಮುಖ್ಯ ಅತಿಥಿಗಳಾಗಿದ್ದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯ ಹರಿಪ್ರಸಾದ್ ಶೆಟ್ಟಿ ವಂದಿಸಿದರು.

ಆಷಾಢ ಮಾಸದ ವಿಶಿಷ್ಟ ತಿಂಡಿ-ತಿನಿಸುಗಳು, ಗ್ರಾಮೀಣ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News