ಯುಎಇಯಿಂದ ಶುಭಸುದ್ದಿ : ಕಾರ್ಮಿಕರಿಗೆ ಉಚಿತ ವಸತಿ ವ್ಯವಸ್ಥೆ
ಅಬುದಾಭಿ,ಜು.17: ಎರಡು ಸಾವಿರ ದಿರ್ಹಾಮ್‌ಗಿಂತಲೂ ಕಡಿಮೆ ಮಾಸಿಕ ವೇತನ ಪಡೆಯುವ ಕಾರ್ಮಿಕರಿಗೆ, ಅವರ ಮಾಲಕರು ಉಚಿತ ವಸತಿ ಸೌಲಭ್ಯವನ್ನು ನೀಡುವಂತೆ ಯುಎಇನ ಮಾನವಸಂಪನ್ಮೂಲ ಹಾಗೂ ಎಮಿರೇಟೈಸೇಶನ್ ಸಚಿವಾಲಯ ಆದೇಶ ಹೊರಡಿಸಿದೆ.. 50ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಈ ನಿಯಮವು ಅನ್ವಯವಾಗಲಿದೆಯೆಂದು ಅದು ಹೇಳಿದೆ.
ಈ ಆದೇಶವು ಡಿಸೆಂಬರ್ ತಿಂಗಳಿಂದ ಜಾರಿಗೆ ಬರಲಿದೆಯೆಂದು ಮಾನವಸಂಪನ್ಮೂಲ ಹಾಗೂ ಎಮಿರೇಟೈಸೇಶನ್ ಸಚಿವ ಸಕ್ರ್ ಗೋಬಾಶ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
500 ನಿವಾಸಿಗಳಿಗಿಂತಲೂ ಕಡಿಮೆ ಇರುವ ಕಾರ್ಮಿಕ ವಸತಿ ಪ್ರದೇಶಗಳು, 2014ರಲ್ಲಿ ಸಚಿವಾಲಯವು ಜಾರಿಗೊಳಿಸಿದ ಸಚಿವಾಲಯದ ಆದೇಶದಲ್ಲಿ ನಿಗದಿಪಡಿಸಲಾದ ಸಾಮಾನ್ಯ ಮಾನದಂಡಗಳನ್ನು ಹಾಗೂ ಪ್ರಮಾಣಿತ ಸೇವಾ ಗುಣಮಟ್ಟಗಳನ್ನು ಹೊಂದಿರಬೇಕೆಂದು ಸಚಿವಾಲಯ ತಿಳಿಸಿದೆ.ಅದೇ ರೀತಿ 500ಕ್ಕೂ ಅಧಿಕ ಕಾರ್ಮಿಕರನ್ನು ಹೊಂದಿರುವ ವಸತಿ ಪ್ರದೇಶಗಳಿಗೆ 2009ರಲ್ಲಿಸಂಪುಟ ಜಾರಿಗೊಳಿಸಿದ ಆದೇಶದ ನಿಯಮಗಳು ಅನ್ವ.ಯಿಸುತ್ತವೆಯೆಂದು ಅದು ಹೇಳಿದೆ.
ಮಾಸಿಕವಾಗಿ 2 ಸಾವಿರ ದಿರ್ಹಾಮ್‌ಗಿಂತಲೂ ಹೆಚ್ಚು ಆದಾಯವನ್ನು ಹೊಂದಿರುವ 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳ ಕಾರ್ಮಿಕರ ಕ್ಷೇಮಕ್ಕಾಗಿ ನಿಯಮಗಳು ಹಾಗೂ ಕಾಯಿದೆಗಳನ್ನು ರೂಪಿಸುವ ಅಧಿಕಾರವನ್ನು ಮಾನವಸಂಪನ್ಮೂಲ ಹಾಗೂ ಎಮಿರೇಟೈಸೇಶನ್ ಸಚಿವಾಲಯವು ಸ್ಥಳೀಯಾಡಳಿತದ ಅಧಿಕಾರಿಗಳಿಗೆ ನೀಡಿದೆ. ಇದರಿಂದಾಗಿ ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡುವ ಮೂಲಕ ಕಾರ್ಮಿಕರ ವಸತಿ ಸೌಕರ್ಯದ ಗುಣಮಟ್ಟವನ್ನು ಪರೀಕ್ಷಿಸಲಿದ್ದಾರೆಂದು ಅದು ಹೇಳಿದೆ.
ಎರಡು ಸಾವಿರ ದಿರ್ಹಾಮ್‌ಗಿಂತಲೂ ಕಡಿಮೆ ಮಾಸಿಕ ವೇತನವನ್ನು ಪಡೆಯುವ ಕಾರ್ಮಿಕರ ಜೀವನಮಟ್ಟದ ಬಗ್ಗೆ ಅಧ್ಯಯನ ನಡೆಸಿದ ಬಳಿಕ ತಜ್ಞರು ತಯಾರಿಸಿರುವ ವರದಿಯ ಆಧಾರದಲ್ಲಿ ಈ ಆದೇಶವನ್ನು ಜಾರಿಗೊಳಿಸಲಾಗಿದೆಂದು ಅದು ಹೇಳಿದೆ. ಸಚಿವಾಲಯದ ಅಧಿಕಾರಿಗಳು ಕಾರ್ಮಿಕರ ವಸತಿ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ನಿಯಮಿತವಾಗಿ ತಪಾಸಣೆ ನಡೆಸಲಿದ್ದಾರೆ ಹಾಗೂ ತಮ್ಮ ಕಾರ್ಮಿಕ ವಸತಿ ಸೌಲಭ್ಯಗಳಿಗೆ ಸಂಬಂಧಿಸಿ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಿದ್ದಾರೆಂದು ಅದು ಹೇಳಿದೆ.