×
Ad

ಅಡಿಕೆ,ರಬ್ಬರ್ ಕೃಷಿಕರಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು: ಶಾಂತ ನೀಲಪ್ಪ ಗೌಡ

Update: 2016-07-18 21:13 IST

ಮಂಗಳೂರು, ಜು.18: ಅಡಿಕೆ, ರಬ್ಬರ್ ಕೃಷಿಕರಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರಕಾರ ಕ್ರಮ ಕೈ ಗೊಳ್ಳಬೇಕು ಎಂದು ಬಿಜೆಪಿಯ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಾಂತ ನೀಲಪ್ಪ ಗೌಡ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಬ್ಬರ್ ಬೆಲೆ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ರಬ್ಬರ್ ಬೆಳೆಗಾರರಿಗೆ ಈಗಾಗಲೆ ಬೆಂಬಲ ಬೆಲೆ ನಿಡಲಾಗಿದೆ. ಆದರೆ ಜಿಲ್ಲೆಯ ರೈತರಿಗೆ ಇನ್ನೂ ಬೆಂಬಲ ಬೆಲೆ ನೀಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾಫಿ ಬೆಳೆಗಾರರ ಸ್ಥಿತಿಯೂ ಅದೇ ರೀತಿ ಆಗಿದೆ. ಈ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರ ಬಳಿ ನಿಯೋಗ ತೆರಳಿ ಕಾಫಿ ಬೆಳೆಗಾರರ ಸಂಕಷ್ಟವನ್ನು ತೋಡಿಕೊಂಡಾಗ ಈ ಬಗ್ಗೆ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಮನವಿ ಸಲ್ಲಿಸಲು ಸೂಚಿಸಿದ್ದಾರೆ.

ಬಿಜೆಪಿ ಈ ಬಗ್ಗೆ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಕೇಂದ್ರಕ್ಕೆ ಕೋರಿಕೆ ಸಲ್ಲಿಸುವಂತೆ ಶಾಂತ ನೀಲಪ್ಪ ಗೌಡ ಆಗ್ರಹಿಸಿದರು.

ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಕಾರ ಅವೈಜ್ಞಾನಿಕವಾಗಿದ್ದ ಬೆಳೆ ವಿಮೆ ಯೋಜನೆಯಲ್ಲಿ ಸುಧಾರಣೆ ತಂದು ಇಡೀ ದೇಶಕ್ಕೆ ಏಕ ರೂಪದ ಬೆಳೆ ವಿಮೆಯನ್ನು ಜಾರಿಗೊಳಿಸಿದ್ದಾರೆ. ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ಶೇ.25ರಷ್ಟು ಬೆಳೆಯ ಮೊತ್ತವನ್ನು ಒಂದು ವಾರದೊಳಗೆ ಪರಿಹಾರವಾಗಿ ನೀಡಲಾಗುತ್ತದೆ. ಉಳಿದಂತೆ ಹಾನಿಯಾದ ಪರಿಹಾರದ ಮೊತ್ತವನ್ನು ಮುಂದಿನ 90ದಿನಗಳೊಳಗೆ ನೀಡಲಾಗುವುದು. ಈ ಹಿಂದೆ ಇದ್ದ ರಾಸಾಯನಿಕ ಗೊಬ್ಬರ ಧಾರಣೆಯಲ್ಲಿ ಇಳಿಕೆಯಾಗಿರುವುದು ಕೃಷಿಕರಿಗೆ ಅನುಕೂಲವಾಗಿದೆ. ರೈತರಿಗೆ 3ಲಕ್ಷದವರೆಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ನೀಡಲು 9ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮಣ್ಣಿನ ಆರೋಗ್ಯಕ್ಕಾಗಿ ಸಾಯಿಲ್ ಹೆಲ್ತ್ ಕಾರ್ಡ್ ಯೋಜನೆಯನ್ನು ರೂಪಿಸಲಾಗಿದ್ದು 6 ಕೋಟಿ ಕೃಷಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಶಾಂತ ನೀಲಪ್ಪ ಗೌಡ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಡು ಪ್ರಾಣಿಗಳಿಂದ ಆಗುತ್ತಿರುವ ಬೆಳೆ ಹಾನಿಯ ಬಗ್ಗೆ ಸರಕಾರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಂತ ನೀಲಪ್ಪ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ರಾಜ್ಯ ರೈತ ಮೋರ್ಚಾದ ಮುಖಂಡ ರೇಣು ಕುಮಾರ್, ಜಿಲ್ಲಾ ರೈತ ಮೋರ್ಚಾದ ಮುಖಂಡ ರಾಜೀವ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News