×
Ad

ಎಂಆರ್‌ಪಿಎಲ್‌ಗೆ 1,148 ಕೋಟಿ ರೂ. ನಿವ್ವಳ ಲಾಭ: ಎಚ್.ಕುಮಾರ್

Update: 2016-07-18 21:20 IST

ಮಂಗಳೂರು,ಜು.18: ಒಎನ್‌ಜಿಸಿಯ ಅಂಗ ಸಂಸ್ಥೆಯಾದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ ಲಿಮಿಟೆಡ್ (ಎಂಆರ್‌ಪಿಎಲ್) 2015-16ನೆ ಸಾಲಿನಲ್ಲಿ 1,148 ಕೋಟಿ ರೂ. ನಿವ್ವಳ ಲಾಭಗಳಿಸುವುದರೊಂದಿಗೆ ಸಂಸ್ಥೆ ಚೇತರಿಸಿಕೊಂಡಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಎಚ್.ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕಳೆದ ವರ್ಷ (2014-15ನೆ ಸಾಲಿನಲ್ಲಿ )ಎಂಆರ್‌ಪಿಎಲ್‌ಗೆ 1,712 ಕೋಟಿ ರೂ. ನಷ್ಟ ಉಂಟಾಗಿತ್ತು. ಹಾಲಿ ವರ್ಷದಲ್ಲಿ 15.53 ಮಿ.ಮೆ.ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸಂಸ್ಥೆ ಉತ್ಪಾದನಾ ವಿಭಾಗದಲ್ಲಿ ಗರಿಷ್ಟ ಸಾಧನೆ ಮಾಡಿದೆ. ಎಂಆರ್‌ಪಿಎಲ್ ದೇಶದ ರಿಪೈನರಿಗಳ ಒಟ್ಟು ಉತ್ಪಾದನೆಯಲ್ಲಿ ಶೇ. ರಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದನೆ ಮಾಡುವ ಮೂಲಕ ಸಾಧನೆ ಮಾಡಿದೆ. ಪ್ರಸಕ್ತ ಬಿಎಸ್-4 ಗ್ರೇಡ್ ಪೆಟ್ರೋಲ್ ಹಾಗೂ ಡೀಸೆಲ್ ಉತ್ಪಾದಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಂಆರ್‌ಪಿಎಲ್ 11,507 ಕೋಟಿ ರೂ. ಹಾಗೂ 949 ಕೋಟಿ ರೂ. ರಾಜ್ಯ ಸರಕಾರಕ್ಕೆ ತೆರಿಗೆ ಪಾವತಿಸಿದೆ. ಎಪ್ರಿಲ್ 2015ರಲ್ಲಿ ಎಂಆರ್‌ಪಿಎಲ್ ಪೊಲಿಫ್ರೊಫೆಲಿನ್ ಘಟಕ ಆರಂಭಗೊಂಡಿದೆ. ಭಾರತದ ದಕ್ಷಿಣ ವಲಯದಲ್ಲಿ ಎಂಆರ್‌ಪಿಎಲ್ ಪೊಲಿ ಫ್ರೊಫೆಲಿನ್ ಘಟಕದ ಮೂಲಕ 35ಶೇ. ಮಾರುಕಟ್ಟೆಯನ್ನು ಪಡೆದುಕೊಂಡಿದೆ ಎಂದು ಕುಮಾರ್ ತಿಳಿಸಿದರು.

1,050 ಎಕ್ರೆ ಪ್ರದೇಶದಲ್ಲಿ ಎಂಆರ್‌ಪಿಎಲ್ ವಿಸ್ತರಣಾ ಯೋಜನೆ

ಪೆರ್ಮುದೆ, ಕುತ್ತೆತ್ತೂರು, ಕಂದಾವರ, ತೆಂಕ ಎಕ್ಕಾರು ಸೇರಿದಂತೆ ಪ್ರದೇಶಗಳಲ್ಲಿ ಒಟ್ಟು 1,050 ಎಕ್ರೆ ಭೂಮಿ ಸ್ವಾಧೀನಕ್ಕೆ ಸರಕಾರ ಒಪ್ಪಿಗೆ ನೀಡಿದೆ. ಪೆರ್ಮುದೆ ಗ್ರಾಮದಲ್ಲಿ 446 ಎಕ್ರೆ, ಕುತ್ತೆತ್ತೂರು ಗ್ರಾಮದಲ್ಲಿ 383 ಎಕ್ರೆ, ಕಂದಾವರ ಗ್ರಾಮದಲ್ಲಿ 175 ಎಕ್ರೆ, ತೆಂಕ ಎಕ್ಕಾರು ಗ್ರಾಮದಲ್ಲಿ 7.75 ಎಕ್ರೆ ಸೇರಿದಂತೆ ಈ ಪ್ರದೇಶದ ಆರ್‌ಟಿಸಿ ಹೊಂದಿರುವ ಶೇ. 75ರಷ್ಟು ಭೂ ಮಾಲಕರು ತಮ್ಮ ಭೂಮಿಯನ್ನು ಸರಕಾರದ ಸ್ವಾಧೀನಕ್ಕೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಭೂಮಿ ಕಳೆದುಕೊಳ್ಳುವ ಭೂ ಸಂತ್ರಸ್ತರಿಗೆ ಪುನರ್ವಸತಿ ಯೋಜನೆ, ಜಿಲ್ಲಾಧಿಕಾರಿಯ ಶಿಫಾರಸಿನ ಮೇರೆಗೆ ಉದ್ಯೋಗವನ್ನು ನೀಡಲಾಗುವುದು. ಈ ಭೂಸ್ವಾಧೀನ ಪ್ರದೇಶದ ಶೇ. 33 ಭಾಗ ಹಸಿರು ಪರಿಸರವನ್ನು ಕಾಯ್ದುಕೊಳ್ಳುವುದು ಮತ್ತು ಪುನರ್ವಸತಿ ಕೇಂದ್ರ ನಿರ್ಮಾಣ ಯೋಜನೆಗಾಗಿ ಬಳಕೆಯಾಗಲಿದೆ ಎಂದು ಕುಮಾರ್ ತಿಳಿಸಿದರು.

ಮೂರನೆ ಹಂತದ ವಿಸ್ತರಣಾ ಯೋಜನೆಯಲ್ಲಿ ಕೋಕ್ ಗ್ಯಾಸಿಫಿಕೇಶನ್ ಯೋಜನೆ 12 ಸಾವಿರದಿಂದ ಸುಮಾರು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂಆರ್‌ಪಿಎಲ್‌ನ ರಿಫೈನರಿ ವಿಭಾಗದ ನಿರ್ದೇಶಕ ಎಂ.ವೆಂಕಟೇಶ್, ಹಣಕಾಸು ವಿಭಾಗದ ನಿರ್ದೇಶಕ ಎ.ಕೆ.ಸಾಹು, ಡಿಜಿಎಂ ಬಿ.ಪ್ರಶಾಂತ್ ಬಾಳಿಗ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News