ಜು.27ರಂದು ದಿಲ್ಲಿ ಪ್ರಧಾನ ಪೀಠದಿಂದ ಎತ್ತಿನಹೊಳೆ ವಿರುದ್ಧದ ಅರ್ಜಿ ವಿಚಾರಣೆ

Update: 2016-07-18 17:50 GMT

ಮಂಗಳೂರು, ಜು.18;ಚೆನ್ನೈ ಹಸಿರು ಪೀಠದಿಂದ ದಿಲ್ಲಿಯ ಪ್ರಧಾನ ಪೀಠಕ್ಕೆ ವರ್ಗಾವಣೆಯಾದ ಎತ್ತಿನಹೊಳೆ ಯೋಜನೆ ವಿರುದ್ಧದ ಅರ್ಜಿಗಳನ್ನು ದಿಲ್ಲಿಯ ಪ್ರಧಾನ ಹಸಿರು ಪೀಠ ಸ್ವೀಕರಿಸಿದ್ದು, ಮುಂದಿನ ವಿಚಾರಣೆಗೆ ಜು.27ರಂದು ದಿನಾಂಕ ನಿಗದಿಪಡಿಸಿದೆ.

ಎತ್ತಿನಹೊಳೆ ಯೋಜನೆ ವಿರೋಧಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳ ವಿಚಾರಣೆ ಈವರೆಗೆ ಚೆನ್ನೈ ಎನ್‌ಜಿಟಿಯಲ್ಲಿರುವ ಒಂದು ಪೀಠದಲ್ಲಿ ನಡೆಯುತ್ತಿತ್ತು. ಇತ್ತೀಚೆಗೆ ಆ ಪೀಠದ ತಜ್ಞ ಸದಸ್ಯ ಪ್ರೊ.ನಾಗೇಂದ್ರನ್ ಸ್ವಯಂ ರಾಜಿನಾಮೆ ತೆಗೆದುಕೊಂಡಿದ್ದರು. ಅಲ್ಲದೆ, ನ್ಯಾಯಮೂರ್ತಿಗಳು ಕೂಡ ವಯೋ ನಿವೃತ್ತರಾಗಿದ್ದರಿಂದ ಎತ್ತಿನಹೊಳೆ ಯೋಜನೆಯ ಎಲ್ಲ ಅರ್ಜಿಗಳನ್ನು ಎನ್‌ಜಿಟಿಯ ಮತ್ತೊಂದು ಪೀಠಕ್ಕೆ ವರ್ಗಾಯಿಸಲಾಗಿತ್ತು.

ಪೀಠದ ಬದಲಾವಣೆ ಆಗಿದ್ದರಿಂದ ಎಲ್ಲ ಅರ್ಜಿದಾರರು ಮತ್ತೊಮ್ಮೆ ಮೊದಲಿನಿಂದ ವಾದ ಮಂಡನೆ ಮಾಡಬೇಕಾಗಿತ್ತು. ಹಾಗಾಗಿ ಎನ್‌ಜಿಟಿಯ ಪ್ರಧಾನ ಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಲು ಅರ್ಜಿದಾರರು ಕೋರಿಕೆ ಸಲ್ಲಿಸಿದ್ದರು.

ಅದರಂತೆ ಸೋಮವಾರ ಪ್ರಕರಣ ಕೈಗೆತ್ತಿಕೊಂಡ ದಿಲ್ಲಿಯ ಪ್ರಧಾನ ಪೀಠ, ಅರ್ಜಿಗಳನ್ನು ಸ್ವೀಕರಿಸಿ ಜು.27ರಂದು ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ. ಉಳಿದೆರಡು ಅರ್ಜಿಗಳನ್ನೂ ದೆಹಲಿಯ ಪೀಠ ಚೆನ್ನೈ ಎನ್‌ಜಿಟಿಯಿಂದ ವರ್ಗಾವಣೆ ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಅರ್ಜಿದಾರ ಸೋಮಶೇಖರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News