ಐಸಿವೈಎಂನಿಂದ ಆಲಂಗಾರಿನಲ್ಲಿ ಹಸಿರು ಭೂಮಿಗಾಗಿ ನಾವು ನೀವು

Update: 2016-07-18 18:22 GMT

ಮೂಡುಬಿದಿರೆ, ಜು.18: ಮೂಡುಬಿದಿರೆ ವಲಯ ಭಾರತೀಯ ಕಥೊಲಿಕ್ ಯುವ ಸಂಚಲನದ ವತಿಯಿಂದ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅಲಂಗಾರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಸಿರು ಭೂಮಿಗಾಗಿ ನಾವು ನೀವು ಕಾರ್ಯಕ್ರಮ ನಡೆಯಿತು.

ಐಸಿವೈಎಂ ವಲಯ ನಿರ್ದೇಶಕರಾದ ವಂ.ಸ್ವಾ. ಬೇಸಿಲ್ ವಾಸ್ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೃಕ್ಷಮಿತ್ರ ಪ್ರಶಸ್ತಿ ಪುರಸ್ಕೃತ ಮುಹಮ್ಮದಾಲಿ ಅಬ್ಬಾಸ್ ಮಾತನಾಡಿ, ಮೂಡುಬಿದಿರೆಯ ಕ್ರೈಸ್ತ ಯುವಜನರು ದೇವಸ್ಥಾನದ ವಠಾರದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಾಮರಸ್ಯದ ಜೊತೆಗೆ ಪರಿಸರ ಪ್ರೀತಿಗೂ ನೈಜ ನಿದರ್ಶನವಾಗಿದೆ. ಯುವಜನರಲ್ಲಿ ಇಂತಹ ಮುಕ್ತ ಮನೋಭಾವ ಬೆಳೆದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಜಿ.ಡಿ. ದಿನೇಶ್ ಮಾತನಾಡಿ, ಈ ವರ್ಷ ಬೇಸಿಗೆಯಲ್ಲಿ ತೀವ್ರ ನೀರಿನ ಕೊರತೆ ಉಂಟಾಗಿದ್ದು, ಗಿಡಮರಗಳನ್ನು ಬೆಳೆಸುವುದು ಅತ್ಯಗತ್ಯ ಎಂಬುದನ್ನು ತೋರಿಸಿ ಕೊಟ್ಟಿದೆ. ಈ ನಿಟ್ಟಿನಲ್ಲಿ ಯುವಜನರು ಗಿಡಗಳನ್ನು ನೆಟ್ಟು ಪೋಷಿಸುವುದು ಇಂದಿನ ಅಗತ್ಯ ಎಂದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಶ್ರೀನಿವಾಸ್ ಭಟ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ, ಮೂಡುಬಿದಿರೆ ಪುರಸಭಾ ಸದಸ್ಯ ಪಿ.ಕೆ. ಥೋಮಸ್, ಹೊಸ್ಮಾರು ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಗಾಣಿಗ, ಐಸಿವೈಎವ್ ಕೇಂದ್ರೀಯ ಸಮಿತಿಯ ಲೆಕ್ಕಪರಿಶೋಧಕ ಅನೀಶ್ ಡಿಸೋಜಾ ಅಲಂಗಾರು ಉಪಸ್ಥಿತರಿದ್ದರು.

ಐಸಿವೈಎಂ ವಲಯಾಧ್ಯಕ್ಷ ಜೈಸನ್ ಪಿರೇರಾ ಶಿರ್ತಾಡಿ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಫ್ರಾನ್ಸಿಸ್ ಮೊಂತೇರೊ ವಂದಿಸಿದರು. ಕ್ಲೇರೆನ್ಸ್ ಡಾಯಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಐಸಿವೈಎಂ ಸದಸ್ಯರಿಂದ ಶ್ರಮದಾನ, ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಗಿಡಗಳ ಸಂರಕ್ಷಣೆಗೆ ಅಬ್ಬಾಸ್ ಪ್ರಾಯೋಜಿತ ’ಟ್ರೀ ಗಾರ್ಡ್’ಗಳನ್ನು ಅಳವಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News