ಕುಂಬಳೆ: ನಿಯಂತ್ರಣ ತಪ್ಪಿ 10 ಅಡಿ ಆಳದ ಕಂದಕಕ್ಕುರುಳಿದ ಗ್ಯಾಸ್ ಟ್ಯಾಂಕರ್
Update: 2016-07-19 12:40 IST
ಕಾಸರಗೋಡು, ಜು.19: ಗ್ಯಾಸ್ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ 10 ಅಡಿ ಆಳದ ಕಂದಕಕ್ಕುರುಳಿದ ಘಟನೆ ಮಂಗಳೂರು-ಕಾಸರಗೋಡು ಹೆದ್ದಾರಿಯ ಕುಂಬಳೆ ಸಮೀಪದ ಶಿರಿಯ ಎಂಬಲ್ಲಿ ಸಂಭವಿಸಿದೆ. ಟ್ಯಾಂಕರ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ.
ಮಂಗಳೂರಿನಿಂದ ಕಣ್ಣೂರಿಗೆ ಗ್ಯಾಸ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಶಿರಿಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಿಂದ ಕಂದಕಕ್ಕಿಳಿದಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಧಾವಿಸಿದ್ದು, ಗ್ಯಾಸ್ ಸೋರಿಕೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಟ್ಯಾಂಕರ್‌ನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ತಿಳಿದುಬಂದಿದೆ.