‘ನಾಲ್ಕನೆ ವರ್ಷದೆಡೆಗೆ-ಭರವಸೆಯ ನಡಿಗೆ’ ಪ್ರಚಾರ ಕಲಾಜಾಥಾಕ್ಕೆ ಚಾಲನೆ

Update: 2016-07-19 09:23 GMT

ಮಂಗಳೂರು, ಜು.19: ವಾರ್ತಾ ಮತ್ತು ಪ್ರಚಾರ ಇಲಾಖೆ ಆಯೋಜಿಸಿದ ರಾಜ್ಯ ಸರಕಾರದ ಸಾಧನೆ ಬಿಂಬಿಸುವ ‘ನಾಲ್ಕನೆ ವರ್ಷದೆಡೆಗೆ-ಭರವಸೆಯ ನಡಿಗೆ’ ಪ್ರಚಾರ ಕಲಾಜಾಥಾ ಕಾರ್ಯಕ್ರಮಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರದ ಮೂರು ವರ್ಷದ ಸಾಧನೆಯ ಜತೆಗೆ ವಿವಿಧ ಯೋಜನೆಗಳ ಬಗ್ಗೆ ಕಲಾ ಜಾಥಾದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 20 ದಿವಸ ಪ್ರಚಾರ ನಡೆಯಲಿದೆ ಎಂದರು. ಕಲಾ ಜಾಥಾ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂಚರಿಸುವ ಮೂಲಕ ಸರಕಾರದ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದೆ ಎಂದು ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಜೀರ್, ಡಿಸಿಪಿ ಶಾಂತರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ)ಜಿ.ಎಸ್.ಹೆಗ್ಡೆ ಉಪಸ್ಥಿತರಿದ್ದರು.

ಕರ್ನಾಟಕದ ಸಾಧನೆಯ ಪ್ರಚಾರಕ್ಕೆ ಆಂಧ್ರ ಪ್ರದೇಶದ ವಾಹನ!

 ಪ್ರಚಾರ ಜಾಥಾದ ವಿಶೇಷತೆಯೆಂದರೆ, ಕರ್ನಾಟಕ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಆಂಧ್ರ ಪ್ರದೇಶದ ವಾಹನ ನೋಂದಣಿ ಸಂಖ್ಯೆಯನ್ನು ಹೊಂದಿರುವ ವಾಹನವನ್ನು ಉಪಯೋಗಿಸಿರುವುದು. ಆಂಧ್ರ ಮೂಲದ ಸಂಸ್ಥೆಯೊಂದು ಇಡೀ ಕರ್ನಾಟಕದಲ್ಲಿ ಪ್ರಚಾರದ ಗುತ್ತಿಗೆ ವಹಿಸಿರುವ ಕಾರಣ ಅಲ್ಲಿನ ವಾಹನ ಬಳಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ವಾಹನದಲ್ಲಿ ಮೈಕ್ ಮೂಲಕ ಸರಕಾರದ ಸಾಧನೆಯನ್ನು ಪ್ರಚಾರ ಪಡಿಸಬೇಕಿದೆ. ಆದರೆ ಉದ್ಘಾಟನೆಯ ಸಂದರ್ಭ ಮೈಕ್ ವ್ಯವಸ್ಥೆ ಸರಿ ಇಲ್ಲದೆ ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿಯವರೇ ಕಿರಿಕಿರಿ ಅನುಭವಿಸಿದ ಪ್ರಸಂಗ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News