ಪುತ್ತೂರು: ಶಿಕ್ಷಕರ ವರ್ಗಾವಣೆ ವಿರೋಧಿಸಿ ಬಿಇಒ ಕಚೇರಿ ಮುಂಭಾಗದಲ್ಲಿ ಧರಣಿ
ಪುತ್ತೂರು, ಜು.19: ಕೌನ್ಸೆಲಿಂಗ್ ಮೂಲಕ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಬೇರೆ ಶಾಲೆಗೆ ವರ್ಗಾಯಿಸುವ ಇಲಾಖೆಯ ಕ್ರಮವನ್ನು ವಿರೋಧಿಸಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವಿವಿಧ ಶಾಲಾ ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಇಲಾಖೆ ತನ್ನ ನಿಲುವು ಬದಲಾವಣೆಗೊಳಿಸುವ ತನಕ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಧರಣಿನಿರತರು ಎಚ್ಚರಿಸಿದರು. ಈ ಸಂದರ್ಭ ಮಾತನಾಡಿದ ಹಾರಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಹಾರಾಡಿ ಸೇರಿದಂತೆ ಕೆಲ ಶಾಲೆಗಳಲ್ಲಿ ಪೋಷಕರ ಪ್ರಯತ್ನದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದೀಗ ಶೈಕ್ಷಣಿಕ ವರ್ಷದ ಮದ್ಯದಲ್ಲಿ ಶಿಕ್ಷಕರನ್ನು ಇದ್ದಕ್ಕಿದ್ದಂತೆ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಮಾಡಿದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಲಿದೆ. ಮಕ್ಕಳ ಹಿತದೃಷ್ಟಿಯಿಂದ ವರ್ಗಾವಣೆ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.
ಮಾವಿನಕಟ್ಟೆ ಶಾಲಾ ಎಸ್‌ಡಿಎಂಸಿ ಸದಸ್ಯ ಬೂಡಿಯಾರ್ ಪುರುಷೋತ್ತಮ್ ರೈ, ಮೊಟ್ಟೆತ್ತಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿಲೀಪ್, ಕೆಮ್ಮಾಯಿ ಕೃಷ್ಣನಗರ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಿನ್ನಪ್ಪ ಗೌಡ, ಹಿರೇಬಂಡಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣ ಹೊಸಮನೆ, ಸೂರಂಬೈಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್, ಏಕತ್ತಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪದ್ಮನಾಭ, ಕುದ್ಮಾರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಲತಾ, ಕೊಂರ್ಬಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಲೀಲಾವತಿ ಮತ್ತಿತರರು ಮಾತನಾಡಿ ತಮ್ಮ ಶಾಲೆಯಲ್ಲಿನ ಶಿಕ್ಷಕರನ್ನು ವರ್ಗಾವಣೆಗೊಳಿಸದಂತೆ ವಿನಂತಿಸಿದರು.
ಧರಣಿನಿರತರ ಮನವಿಗೆ ಪ್ರತಿಕ್ರಿಯೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಸರಕಾರದ ಆದೇಶದಂತೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಈ ಹಿಂದೆ ಎರಡು ಬಾರಿ ಕೌನ್ಸೆಲಿಂಗ್‌ಗೆ ದಿನ ನಿಗದಿ ಮಾಡಲಾಗಿದ್ದರೂ ಕೌನ್ಸಿಲಿಂಗ್ ನಡೆಸಲು ಸಾಧ್ಯವಾಗಿಲ್ಲ. ಸೋಮವಾರ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಆಯುಕ್ತರು ಕೌನ್ಸೆಲಿಂಗ್ ನಡೆಸಲು ಸ್ಪಷ್ಟ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೌನ್ಸಿಲಿಂಗ್ ಮಾಡಲಾಗುತ್ತಿದೆ. ಇದನ್ನು ತಡೆಯಲು ತನಗಾಗಲೀ, ಡಿಡಿಪಿಐ ಅವರಿಗೆ ಆಗಲೀ ಸಾಧ್ಯವಿಲ್ಲ. ಈ ಬಗ್ಗೆ ಸರಕಾರವೇ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲು ಪ್ರಯತ್ನ ನಡೆಸಿದರು.
ಆದರೆ ಇದನ್ನು ಒಪ್ಪದ ಪೋಷಕರು ಕೌನ್ಸೆಲಿಂಗ್ ಮುಂದೂಡುವಂತೆ ಪಟ್ಟು ಹಿಡಿದರು. ಆಗ್ರಹ ಹೆಚ್ಚಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪೊಲೀಸರು, ಪ್ರತ್ಯೇಕ ಸಭೆ ನಡೆಸಲು ವೇದಿಕೆ ಕಲ್ಪಿಸಿದರು. ಅದರಂತೆ ಎಸ್‌ಡಿಎಂಸಿ ಅಧ್ಯಕ್ಷರ ಜೊತೆ ಬಿಇಒ ಸಬೆ ನಡೆಸಿ, ಮನವಿ ಪಡೆದುಕೊಂಡರು.