ನಗರದಲ್ಲಿ 1 ಅಡುಗೆ ಅನಿಲ ಸಿಲಿಂಡರ್ ಹೊಂದಿರುವವರಿಗೆ ಮತ್ತೊಂದು ಉಚಿತ!

Update: 2016-07-19 14:09 GMT

ಮಂಗಳೂರು,ಜು.19: ನಗರ ಪ್ರದೇಶದಲ್ಲಿ ಒಂದು ಅಡುಗೆ ಅನಿಲ ಸಿಲಿಂಡರ್ ಹೊಂದಿರುವವರಿಗೆ ಮತ್ತೊಂದು ಸಿಲಿಂಡರನ್ನು ರಾಜ್ಯ ಸರಕಾರದಿಂದ ಉಚಿತವಾಗಿ ನೀಡುವ ವಿನೂತನ ಕಾರ್ಯಕ್ರಮವನ್ನು ಇಲಾಖೆ ರೂಪಿಸಿದ್ದು, ಈ ಬಗ್ಗೆ ಸರಕಾರದ ಮುಂದೆ ಪ್ರಸ್ತಾವನೆ ಇರಿಸಲಾಗಿದ್ದು, ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಾಕ್ಷಣ ವಿತರಣೆ ಕಾರ್ಯ ಆರಂಭಗೊಳ್ಳಲಿದೆ ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದಲ್ಲಿ ಒಂದು ಸಿಲಿಂಡರ್ ಹೊಂದಿರುವವರು ಅದು ಖಾಲಿಯಾದ ಬಳಿಕ ಮತ್ತೊಂದು ಸಿಲಿಂಡರ್ ದೊರೆಯುವವರೆಗೆ ಅಡುಗೆಗೆ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಸರಕಾರ ಮುಂದಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗೆ ಪೂರಕವಾಗಿ, ಒಂದು ಸಿಲಿಂಡರ್ ಹೊಂದಿರುವವರು ಮತ್ತೊಂದು ಸಿಲಿಂಡರ್ ಬದಲಿಗೆ ಎರಡು ಸೋಲಾರ್ ದೀಪಗಳನ್ನು ಪಡೆಯಬಹುದಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ದೊರಕಿದ ಬಳಿಕ ಸಾರ್ವಜನಿಕರಿಗೆ ವಿತರಣೆ ಕಾರ್ಯ ನಡೆಯಲಿದೆ ಎಂದು ಸಚಿವ ಖಾದರ್ ತಿಳಿಸಿದರು.

ಪಡಿತರ ವ್ಯವಸ್ಥೆಯಡಿ ಅಡುಗೆ ಅನಿಲ ಹೊಂದಿದವರಿಗೆ ಪ್ರಸ್ತುತ ಸೀಮೆಎಣ್ಣೆ ಸಿಗುತ್ತಿಲ್ಲ. ಆದರೆ ಮಲೆನಾಡು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್‌ನ ವ್ಯವಸ್ಥೆಯೂ ಇಲ್ಲದೆ ಕತ್ತಲಲ್ಲಿ ಬದುಕುವಂತಹ ಪರಿಸ್ಥಿತಿ ಇದೆ. ಹಾಗಾಗಿ ಮಲೆನಾಡು ಪ್ರದೇಶಗಳಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ಮೂರು ತಿಂಗಳ ಅವಧಿಗೆ ಸೀಮೆಎಣ್ಣೆ ಪೂರೈಕೆಗೆ ಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತನೆ ಇದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News