ಕುಳಾಯಿ ಬಂದರು ಕಾಮಗಾರಿ ಶೀಘ್ರ ಆರಂಭ: ರಾಮಚಂದರ್ ಬೈಕಂಪಾಡಿ

Update: 2016-07-19 13:25 GMT

ಮಂಗಳೂರು, ಜು, 19: ಮೀನುಗಾರರು ಇತ್ತೀಚೆಗೆ ನಡೆಸಿದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕುಳಾಯಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವ ಋತು ಮೀನುಗಾರಿಕೆ ಬಂದರು ಪ್ರಸ್ತಾವನೆಯನ್ನು ರಾಜ್ಯ ಸರಕಾರ ಮಂಜೂರಾತಿಗಾಗಿ ಕೇಂದ್ರಕ್ಕೆ ಕಳುಹಿಸಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ರಾಮಚಂದರ್ ಬೈಕಂಪಾಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಬಂದರಿನ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಕಳೆದ 20 ವರ್ಷಗಳಿಂದ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ನವಮಂಗಳೂರು ಬಂದರು ಮೂಲಕ ಸುಮಾರು 300 ಜನರಿಗೆ ಅವಕಾಶ ನೀಡಲಾಗಿದೆ. ನವಮಂಗಳೂರು ಬಂದರಿನ ಸುರಕ್ಷತಾ ದೃಷ್ಟಿಯಿಂದ ಕುಳಾಯಿಯಲ್ಲಿ ಪ್ರತ್ಯೇಕ ಸರ್ವ ಋತು ಮೀನುಗಾರಿಕೆ ಬಂದರು ನಿರ್ಮಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನವಮಂಗಳೂರು ಬಂದರು ಸುಮಾರು 70 ಕೋಟಿ ರೂ. ದೇಣಿಗೆ ನೀಡಿದೆ. ಮೀನುಗಾರರ ನಿಯೋಗ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಸಾಗರ ಮಾಲ ಯೋಜನೆಯಡಿ 70 ಕೋಟಿ ರೂ. ಹಾಗೂ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿ 90 ಕೋಟಿ ರೂ. ಮಂಜೂರು ಮಾಡಿಸಿದೆ. ಮೀನುಗಾರರ ನಿಯೋಗ ಶೀಘ್ರದಲ್ಲೇ ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿಲಾನ್ಯಾಸ ಮಾಡಲು ವಿನಂತಿಸಲಿದೆ ಎಂದು ಅವರು ನುಡಿದರು.
   
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಂಪ್ರದಾಯಿಕ ಮೀನುಗಾರ ಮಹಿಳೆಯರಿಗೆ ಶೇ.3 ಬಡ್ಡಿ ದರದಲ್ಲಿ 50 ಸಾವಿರ ರೂ. ಜಾಮೀನು ರಹಿತ ಸಾಲ ಯೋಜನೆ ಜಾರಿಗೊಳಿಸಿದ್ದರು. ಈ ಯೋಜನೆಯಡಿ ಮೊದಲ ವರ್ಷ ಶೇ.9 ಸಬ್ಸಿಡಿ ಹಣ ನೀಡಿದನ್ನು ಬಿಟ್ಟರೆ ಕಳೆದ ಎರಡು ವರ್ಷಗಳಿಂದ ಸಬ್ಸಿಡಿ ಜಮಾ ಮಾಡದೆ ಮೀನುಗಾರ ಮಹಿಳೆಯರನ್ನು ಸತಾಯಿಸಲಾಗುತ್ತಿದೆ. ಇದೀಗ ಜಿಲ್ಲಾಧಿಕಾರಿಯವರು ಸಬ್ಸಿಡಿ ಹಣವನ್ನು ತಕ್ಷಣ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ನಾಡದೋಣಿಗೆ ನೀಡುತ್ತಿದ್ದ ಸೀಮೆ ಎಣ್ಣೆಯನ್ನು 275 ಲೀಟರ್‌ಗೆ ಏರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಿಖಿತ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹೇಳಿದ ಅವರು, ಬಂದರು ನಿರ್ಮಾಣದ ಕುರಿತು ವಿಶೇಷ ಮುತುವರ್ಜಿ ವಹಿಸಿದ ಬಂದರು ಅಧ್ಯಕ್ಷ ಪಿ.ಸಿ. ಫರೀದಾರರಿಗೆ ಅಭಿನಂದನೆ ಸಲ್ಲಿಸಿದರು.

2012ರಲ್ಲಿ ಎಂಎಸ್‌ಇಝಡ್ ಸಮುದ್ರದಲ್ಲಿ ತಾಜ್ಯ ವಿಲೇವಾರಿಗೆ ಬೃಹತ್ ಪೈಪ್‌ಲೈನ್ ಅಳವಡಿಸಿರುವುದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ಆದ ತೊಂದರೆಗೆ 1 ಕೋಟಿ ರೂ. ಪರಿಹಾರ ನೀಡಿತ್ತು. ಆದರೆ ಮೂರು ವರ್ಷ ಕಳೆದರೂ ಪರಿಹಾರ ವಿತರಣೆಯಾಗಲಿಲ್ಲ. ಇದೀಗ ಜು.18ರಂದು ಪರಿಹಾರದ ವಿತರಣೆಯಾಗಿದೆ. ಮೂರು ವರ್ಷ ವಿಳಂಬವಾದ ಹಿನ್ನೆಲೆಯಲ್ಲಿ 14 ಲಕ್ಷ ರೂ. ಬಡ್ಡಿ ಸೇರಿಸಿ ಪರಿಹಾರ ದೊರೆತಿದೆ ಎಂದು 14 ಪಟ್ಣ ಮೊಗವೀರ ಸಭಾ ಅಧ್ಯಕ್ಷ ರಾಜೀವ್ ಕಾಂಚನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ 14 ಪಟ್ಣ ಮೊಗವೀರ ಸಭೆ ಅಧ್ಯಕ್ಷ ರಾಜೀವ್ ಕಾಂಚನ್, ವಾಮನ್ ಅಮೀನ್ ಬೈಕಂಪಾಡಿ ಹಾಗೂ ಧರ್ಮ ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News