×
Ad

ವಿದ್ಯಾರ್ಥಿಗಳ ಸಾಧನೆಯಿಂದ ಶೈಕ್ಷಣಿಕ ಸಂಸ್ಥೆಗಳಿಗೆ ಗೌರವ: ಡಾ.ಮಂಜುನಾಥ ಭಂಡಾರಿ

Update: 2016-07-19 20:08 IST

ಮಂಗಳೂರು, ಜು.19: ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಯಿಂದ ಸಂಸ್ಥೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ ಎಂದು ಎಂದು ಅಡ್ಯಾರಿನ ಸಹ್ಯಾದಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ಅವರು ಇಂದು ಕಾಲೇಜಿನ 2ನೆ ವರ್ಷದ ಎಂಬಿಎ ವಿದ್ಯಾರ್ಥಿ ರಾಜೇಶ್ ಟಿ. ಮಾಥ್ಯು ಅವರು ಬಹ್ರೈನ್‌ನ ಕಿಂಗ್‌ಡಮ್ ವಿಶ್ವ ವಿದ್ಯಾನಿಲಯಕ್ಕೆ ‘ಎಕ್ರೆಡೇಶನ್ ಆ್ಯಂಡ್ ಕ್ವಾಲಿಟಿ ಅಶುರೆನ್ಸ್ ಆಫೀಸ್ ಸ್ಪೆಶಲಿಸ್ಟ್’ ಆಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಈಗಾಗಲೇ ತಮ್ಮ ಯೋಜನಾ ವರದಿಗಳ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಸ್ಮಾರ್ಟ್ ಹೆಲ್ಮೆಟ್ ತಯಾರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಐಐಟಿಯಂತಹ ಉನ್ನತ ಸಂಸ್ಥೆಗಳ ಸಾಲಿನ ವಿದ್ಯಾರ್ಥಿಗಳಿಗೆ ಸರಿಸಾಟಿಯಾಗಬಲ್ಲ ಸಾಧನೆ ಮಾಡಿದ್ದಾರೆ. ರಾಷ್ಟ್ರಮಟ್ಟದ 9 ಅತ್ಯುತ್ತಮ ಮಾದರಿಗಳಲ್ಲಿ ಸ್ಥಾನ ಪಡೆದಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಕಾರಣವಾಗಿದೆ ಎಂದು ಮಂಜುನಾಥ ಭಂಡಾರಿ ತಿಳಿಸಿದರು.

ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕಲಿಕೆಯ ಸಂದರ್ಭದಲ್ಲಿ ಅವರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಆದರೂ ಸಾಕಷ್ಟು ವಿದ್ಯಾರ್ಥಿಗಳು ತಕ್ಷಣ ಈ ಅವಕಾಶವನ್ನು ತೊರೆದು ಇನ್ನಷ್ಟು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ರೀತಿಯ ಬೆಳವಣಿಗೆಗಳು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಆತ್ಮ ವಿಶ್ವಾಸವನ್ನು ಹೆಚ್ಚಿ ಸುತ್ತದೆ ರಾಜೇಶ್ ಮಾಥ್ಯು ಸಾಧನೆಯಲ್ಲಿ ಸಂಸ್ಥೆಯ ಡಾ.ವಿಶಾಲ್ ಸಮರ್ಥರ ಉತ್ತಮ ಮಾರ್ಗದರ್ಶನ ಶ್ಲಾಘನೀಯ ಎಂದು ಮಂಜುನಾಥ ಭಂಡಾರಿ ತಿಳಿಸಿದರು.

ರಾಜೇಶ್ ಮೈಸೂರಿನಲ್ಲಿ ಲಾರ್ಸನ್ ಆ್ಯಂಡ್ ಟರ್ಬೊ ಸಂಸ್ಥೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದು ಬಿಎಸ್ಸಿ ಪದವೀಧರರಾಗಿದ್ದು ಮಾರ್ಕೆಟಿಂಗ್ ಹಾಗೂ ಎಚ್‌ಆರ್ ವಿಭಾಗದಲ್ಲಿ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದರು. ಎಂಬಿಎ ಇಂಟರ್ನ್‌ಶಿಪ್ ಸಂದರ್ಭದಲ್ಲಿ ಎಂಸಿಎಫ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಬಗ್ಗೆ ಅಧ್ಯಯನ ನಡೆಸಿರುವ ಪ್ರತಿಭಾವಂತ ವಿದ್ಯಾರ್ಥಿ ಎಂದು ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ನಿರ್ದೇಶಕಿ ಡಾ.ವಿಶಾಲ್ ಸಮರ್ಥ ತಿಳಿಸಿದರು.

ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ರಾಜೇಶ್.ಟಿ.ಮಾಥ್ಯು, ವರ್ಷಕ್ಕೆ 14.04 ಲಕ್ಷ ರೂ. ವೇತನ ದೊರೆಯುವ ಉದ್ಯೋಗ ನನಗೆ ಆರಂಭದಲ್ಲಿ ದೊರೆಯಬಹುದು ಎಂದು ಊಹಿಸಿರಲಿಲ್ಲ. ವಿಷಯ ತಿಳಿದಾಗ ಸಂತಸವಾಗಿದೆ. ವಿದೇಶದಲ್ಲಿ ಕಾರ್ಯನಿರ್ವಹಿಸಿ ಪರೋಕ್ಷವಾಗಿ ನನ್ನ ದೇಶಕ್ಕೆ ಸಹಾಯ ಮಾಡುವ ಉದ್ದೇಶ ನನ್ನಲ್ಲಿದೆ. ನನಗೆ ಈ ರೀತಿಯ ಅವಕಾಶ ಪಡೆಯಲು ಕಾರಣವಾದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ನನ್ನ ಮೊದಲ ತಿಂಗಳ ವೇತನವನ್ನು ನೀಡುವುದಾಗಿ ರಾಜೇಶ್ ತಿಳಿಸಿದರು.

ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಯು.ಎಂ.ಭೂಶಿ ಮಾತನಾಡುತ್ತಾ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮೂಲಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಈಗಾಗಲೆ ವಿವಿಧ ಸಂಸ್ಥೆಗಳ ಮೂಲಕ ನೇಮಕಾತಿಗೆ ಅವಕಾಶ ಪಡೆದ ನವಜೀತ್ ಕರ್ಕೇರಾ, ಧೀರಜ್, ಜಗತ್, ಪ್ರೀತಂ, ಸಚಿನ್ ಮೊದಲಾದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಉಪನ್ಯಾಸಕಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

ಮಗನ ಸಾಧನೆಯ ಬಗ್ಗೆ ಹೆಮ್ಮೆ ಇದೆ

ನಾನು ಎಸೆಸೆಲ್ಸಿ ಓದಿದ್ದೇನೆ. ನನ್ನ ಪತ್ನಿ ತ್ರೆಯಸಿಯಮ್ಮ. ಒಂದು ಗಂಡು, ಇಬ್ಬರು ಹೆಣ್ಣು ಮಕ್ಕಳು.ಮೂರು ಮಕ್ಕಳೂ ಉತ್ತಮ ಶಿಕ್ಷಣ ಪಡೆದಿದ್ದಾರೆ. ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವುದು ನನ್ನ ಆಸೆಯಾಗಿತ್ತು. ರಾಜೇಶ್‌ನ ಕಲಿಕೆಗೆ ಅನುಕೂಲವಾಗಲು ಬ್ಯಾಂಕ್ ಸಾಲ ಪಡೆದಿದ್ದೇನೆ. ಈಗ ಅವನಿಗೆ ಉತ್ತಮ ಕೆಲಸ ದೊರೆತಿರುವುದು ನನಗೆ ತೃಪ್ತಿ ನೀಡಿದೆ ಎಂದು ರಾಜೇಶ್ ಟಿ.ಮಾಥ್ಯುರವರ ತಂದೆ ಮಾಥ್ಯು ಸುದ್ದಿಗಾರರಿಗೆ ತಿಳಿಸಿದರು. ಮಾಥ್ಯು ಧರ್ಮಸ್ಥಳದಲ್ಲಿ ಕೆಂಕನಾಜೆ ಎಂಬಲ್ಲಿ ವಾಸವಾಗಿದ್ದು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೌಕರನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News