ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಿತ್ತು ಸಮಾಜದ ಏಳಿಗೆಗೆ ಶ್ರಮಿಸಿ: ಪ್ರೊ.ಜಿಯೋ ಡಿಸಿಲ್ವ
ಪುತ್ತೂರು, ಜು.19: ಅಧ್ಯಾಪನ ಎನ್ನುವುದು ಶ್ರೇಷ್ಠ ಮತ್ತು ಗೌರವಯುತ ವೃತ್ತಿಯಾಗಿದ್ದು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವುದರೊಂದಿಗೆ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ. ಜಿಯೋ ಡಿಸಿಲ್ವಾ ಹೇಳಿದ್ದಾರೆ.
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ನಡೆಯುತ್ತಿರುವ ಐದು ದಿನಗಳ ಅಧ್ಯಾಪಕರ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಿಮ್ಮ ತರಗತಿ ಕೋಣೆಗಳು ಸಂಶೋಧಕರ ಉಗಮಸ್ಥಾನಗಳಾಗಲಿ. ಕಾಲಕ್ಕೆ ತಕ್ಕಂತೆ ನಿಮ್ಮನ್ನು ನೀವು ಅಭಿವೃದ್ದಿಪಡಿಸಿಕೊಳ್ಳುವ ಜೊತೆಯಲ್ಲಿ ವಿದ್ಯಾರ್ಥಿಗಳ ಜ್ಞಾನ ತೃಷೆಯನ್ನು ತಣಿಸಿ ಎಂದು ಅವರು ಕರೆಯಿತ್ತರು.
ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಂಗಾರಡ್ಕ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಐಐಎಸ್‌ಸಿ ಬೆಂಗಳೂರಿನ ಸಿಇಡಿಟಿ ನೆಟ್‌ವರ್ಕ್ ಪ್ರಾಜೆಕ್ಟ್‌ನ ಪೂರ್ವ ಮುಖ್ಯಸ್ಥ ಡಾ.ಅಶೋಕ್ ರಾವ್, ಮೈಸೂರಿನ ಫ್ರೀಲಾನ್ಸ್ ಕನ್ಸಲ್ಟೆಂಟ್‌ನ ನರಸಿಂಹನ್, ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಜನಾರ್ಧನ ಭಟ್ ಸೇಡಿಯಾಪು, ಪ್ರಾಂಶುಪಾಲ ಡಾ. ಗೋವಿಂದೇ ಗೌಡ ಉಪಸ್ಥಿತರಿದ್ದರು.
ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ವಿವಿಧ ಕಾಲೇಜುಗಳ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.
ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ. ಶ್ರೀಕಾಂತ್ ರಾವ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ. ವಿನಯ್ ಪಿ. ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ.ಸಂಗೀತ ಬಿ.ಎಲ್. ನಿರೂಪಿಸಿದರು.