ಬಂಟ್ವಾಳ: ಶಿಕ್ಷಕರ ವರ್ಗಾವಣೆ ಖಂಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ
ಬಂಟ್ವಾಳ, ಜು. 19: ತಾಲೂಕಿನ ವಿವಿಧ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿರುವ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆಗೊಳಿಸುವ ಸರಕಾರದ ಕ್ರಮವನ್ನು ಖಂಡಿಸಿ ತಾಲೂಕು ಶಾಲಾಭಿವೃದ್ಧಿ ಸಮಿತಿ ಮತ್ತು ಸ್ಥಳೀಯ ನಾಗರಿಕರು ಬಿ.ಸಿ.ರೋಡ್‌ನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮಂಗಳವಾರ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿರುವ ಒಟ್ಟು 51 ಮಂದಿ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರ ನೆಪದಲ್ಲಿ ವರ್ಗಾವಣೆಗೊಳಿಸಲು ಮಂಗಳವಾರ ಬಿ.ಸಿ.ರೋಡ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕೌನ್ಸೆಲಿಂಗ್ ನಡೆಸಲು ಆಹ್ವಾನಿಸಿರುವುದು ಶಾಲೆಗಳ ಶಾಲಾಭಿವೃದ್ಧಿ ಸಮಿತಿಯ ಮತ್ತು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇನ್ನೊಂದೆಡೆ ಇಲ್ಲಿನ ಪ್ರಾಥಮಿಕ ಶಿಕ್ಷಕರ ಸಂಘವೂ ಸರಕಾರಿ ಶಾಲೆಗಳ ಸಬಲೀಕರಣ ದೃಷ್ಟಿಯಿಂದ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ತಹಶೀಲ್ದಾರರ ಮೂಲಕ ಸೋಮವಾರ ಸರಕಾರಕ್ಕೆ ಮನವಿ ಸಲ್ಲಿಸಿ ಕೌನ್ಸೆಲಿಂಗ್ ಬಹಿಷ್ಕರಿಸಿತ್ತು.
ಈಗಾಗಲೇ ತೀರಾ ಕಡೆಗಣಿಸಲ್ಪಟ್ಟ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸ್ಥಳೀಯ ನಾಗರಿಕರು ವಿವಿಧ ಮೂಲಭೂತ ಸೌಕರ್ಯ ಸಹಿತ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುವ ಮೂಲಕ ವಿಶೇಷ ಮುತುವರ್ಜಿ ವಹಿಸಿದ್ದರೂ ಸರಕಾರ ಮಾತ್ರ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಒತ್ತಡಕ್ಕೆ ಮಣಿದು ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಪ್ರತಿಕ್ರಿಯಿಸಿ, ಈಗಾಗಲೇ 21 ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಈ ಪ್ರಕ್ರಿಯೆ ಸ್ಥಗಿತಗೊಳಿಸಲು ನಮಗೆ ಸಾಧ್ಯವಿಲ್ಲ ಎಂದರು.
ಜಿಪಂ ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ರಾಜೇಶ ಕೊಟ್ಟಾರಿ, ರಮ್ಲಾನ್, ಹುಸೈನ್, ದಯಾನಂದ ಸಪಲ್ಯ, ಹರೀಶ, ಯಶೋಧ ಮತ್ತಿತರರು ಇದ್ದರು. ತಾಲೂಕಿನ ಕೆದಿಲ, ಎರ್ಮಾಳ್, ಕಲ್ಲಡ್ಕ, ಪುದು, ಮಾರಿಪಳ್ಳ ಮತ್ತಿತರ ಕಡೆಗಳಿಂದ ನೂರಾರು ಮಂದಿ ಪಾಲ್ಗೊಂಡಿದ್ದರು.