ಜು.24ರಂದು ಸಚಿವ ರೋಶನ್ ಬೇಗ್ ರಿಂದ ಮನಪಾ ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಉದ್ಘಾಟನೆ
ಮಂಗಳೂರು, ಜು.20; ಮಂಗಳೂರು ಮಹಾನಗರ ಪಾಲಿಕೆಯಿಂದ ಜು.24 ರಂದು 4 ಕೋಟಿ ವೆಚ್ಚದ ನಾಲ್ಕು ಕಾಮಾಗಾರಿಗಳಿಗೆ ಶಿಲಾನ್ಯಾಸ ಮತ್ತು ಒಂದು ಕೋಟಿ ವೆಚ್ಚದ ಒಂದು ಕಾಮಾಗಾರಿಯ ಉದ್ಘಾಟನೆಯನ್ನು ಸಚಿವ ರೋಶನ್ ಬೇಗ್ ನೆರವೇರಿಸಲಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹರಿನಾಥ್ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಬಂದರು- ಕಸಬಾ ಬಜಾರ್‌ನಲ್ಲಿ ನಿರ್ಗತಿಕ , ರಾತ್ರಿ ವಸತಿ ರಹಿತ ನಾಗರಿಕರಿಗೆ ಸ್ನೇಹಿ ವಸತಿ ವ್ಯವಸ್ಥೆಯ ನೆಲ ಅಂತಸ್ತು ಕಟ್ಟಡವನ್ನು 99.80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಲಾಗುವುದು. 99.85 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪುರಭವನಕ್ಕೆ ಬೋಝನ ಗೃಹ ನಿರ್ಮಾಣ, 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಳಕೆ ಮಾರುಕಟ್ಟೆ ನಿರ್ಮಾಣದ ಮೊದಲ ಹಂತ, 1 ಕೋಟಿ ವೆಚ್ಚದ ಕಾವೂರು ಪ್ರದೇಶದ ಮಾರುಕಟ್ಟೆ ನಿರ್ಮಾಣದ ಮೊದಲನೆ ಅಂತ 1.5 ಕೋಟಿ ವೆಚ್ಚದ ಕಾವೂರು ಜಂಕ್ಷನ್ ಅಭಿವೃದ್ದಿಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಹೇಳಿದರು.ತುಂಬೆಯಲ್ಲಿ ಎರಡನೆ ಹಂತದ ಡ್ಯಾಮ್ ಆರಂಭಿಸಲು ಮೊದಲ ಪ್ರಯತ್ನವಾಗಿ 5 ಮೀಟರ್ ಹೆಚ್ಚಳಕ್ಕೆ ಸರ್ವೆ ಮಾಡಲಾಗಿದೆ. 5 ಮೀಟರ್ ಎತ್ತರ ಮಾಡಲು 53 ಎಕರೆ ಜಮೀನು ಸ್ವಾಧೀನಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈತರ ಜೊತೆ ಮಾತುಕತೆ ನಡೆಸಿ ಗಡಿ ಗುರುತು ಮಾಡಲಾಗವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಲ್ಯಾನ್ಸಿಲಾಟ್‌ಪಿಂಟೋ ಅವರು ಮೇಯರ್ ಅಧ್ಯಕ್ಷತೆಯಲ್ಲಿ ಈಗಾಗಲೇ ನೀರಿನ ಅದಾಲತ್ ಆರಂಭಿಸಲಾಗಿದೆ. ನೀರಿನ ಮೀಟರ್‌ನಲ್ಲಿ ವ್ಯತ್ಯಯವಾಗಿ ಹೆಚ್ಚಿನ ಬಿಲ್ ಬಂದ ಪರಿಣಾಮ ದಂಡ ಕಟ್ಟದೆ ಇರುವ ಸಾರ್ವಜನಿಕರು ಈ ಸಭೆಯಲ್ಲಿ ಅಹವಾಲು ಸಲ್ಲಿಸಿದ್ದರು. ಈ ಅದಾಲತ್‌ನಲ್ಲಿ ನೀರಿನ ಬಿಲ್ ಮೇಲಿನ ದಂಡವನ್ನು ಶೇಕಡ 75 ಕಡಿತಗೊಳಿಸಲಾಗಿದೆ. ಪರಿಣಾಮ ಬಾಕಿ ನೀರಿನ ಬಿಲ್ ಮೊತ್ತ ಹೆಚ್ಚಿನ ಸಂಖ್ಯೆಯಲ್ಲಿ ಪಾವತಿಯಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮನಪಾ ಆಯುಕ್ತ ಮೊಹಮ್ಮದ್ ನಝೀರ್, ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಜೆಸಿಂತ ವಿಜಯ್ ಆಲ್ಪ್ರೆಡ್, ಅಪ್ಪಿಲತಾ, ಕವಿತಾಸನಿಲ್ ಮೊದಲಾದವರು ಉಪಸ್ಥಿತರಿದ್ದರು.