ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೀನು ಕೃಷಿಕರ ದಿನಾಚರಣೆ
ಮಂಗಳೂರು,ಜು.20: ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐಸಿಎಆರ್ - ಕೃಷಿ ವಿಜ್ಞಾನ ಕೇಂದ್ರ, ಮೀನುಗಾರಿಕೆ ಮಹಾವಿದ್ಯಾಲಯ, ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಇಂದು ಮೀನು ಕೃಷಿಕರ ದಿನಾಚರಣೆ ಮತ್ತು ವೈಜ್ಞಾನಿಕ ಮೀನು ಕೃಷಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮೀನುಗಾರಿಕೆ ಮಹಾವಿದ್ಯಾಲಯದ ಸಹವಿಸ್ತರಣಾ ನಿರ್ದೇಶಕ ಡಾ.ಎಂ.ಎನ್. ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಕುಬೇಂದ್ರ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ, ಹಲವು ವರ್ಷಗಳ ಸಂಶೋಧನೆ ಬಳಿಕ ಡಾ.ಹೀರಾಲಾಲ್ ಚೌಧರಿ ಮತ್ತು ಡಾ.ಆಲಿ ಕುಂಞಿ 1957ರಲ್ಲಿ ಕೃತಕ ಮೀನು ಮರಿ ಉತ್ಪಾದನೆಯಲ್ಲಿ ಯಶಸ್ವಿಯಾಗಿದ್ದನ್ನು ಮೀನುಗಾರಿಕಾ ದಿನವನ್ನಾಗಿ ಆಚರಿಸಲಾಗುತ್ತಿರುವುದಾಗಿ ಹೇಳಿದರು.
ಉಡುಪಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಧನಂಜಯ ಮಾತನಾಡಿ, ಪೀಟರ್ ಮಿರಾಂಡ ಅವರನ್ನು ಹೊರತುಪಡಿಸಿ ಕರಾವಳಿಯಲ್ಲಿ ಮೀನು ಕೃಷಿಯನ್ನು ಯಶಸ್ವಿಯಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಮುದ್ರ ಮೀನು ಕೊರತೆ ಇರುವ ಸಂದರ್ಭದಲ್ಲಿ ಸಿಹಿ ನೀರಿನ ಮೀನನ್ನು ಆಹಾರವಾಗಿ ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮೀನು ಕೃಷಿಗೆ ಉತ್ತೇಜನ ನೀಡಬಹುದು. ಇದರ ಜತೆಯಲ್ಲೇ ಅಲಂಕಾರಿಕ ಮೀನುಗಳ ಉತ್ಪಾದನೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದವರು ಹೇಳಿದರು.
ಮೀನು ಸಾಕಣೆ ಬಗ್ಗೆ ಡಾ.ಶಿವಕುಮಾರ್ ಮಗದ, ಸಿಹಿ ನೀರು ಮೀನು ಕೃಷಿ ಬಗ್ಗೆ ಡಾ.ಟಿ.ಎಸ್.ಅಣ್ಣಪ್ಪ ಸ್ವಾಮಿ, ಸಮಗ್ರ ಮೀನು ಕೃಷಿ ಬಗ್ಗೆ ಉಡುಪಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶ್ರೀನಿವಾಸ ಹುಲುಕೋಟೆ, ಇಲಾಖೆ ಸೌಲಭ್ಯ ಬಗ್ಗೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ದಿವ್ಯಾ ತರಬೇತಿ ನೀಡಿದರು.
ದ.ಕ. ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಕುಮಾರ್ ಮಗದ ಸ್ವಾಗತಿಸಿದರು. ಮೀನುಗಾರಿಕೆ ವಿಜ್ಞಾನಿ ಡಾ.ಟಿ.ಎಸ್.ಅಣ್ಣಪ್ಪ ಸ್ವಾಮಿ ವಂದಿಸಿದರು. ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಬಿ.ಸಿ.ಪುನೀತ ಕಾರ್ಯಕ್ರಮ ನಿರೂಪಿಸಿದರು.