ಸೆ. 10-11: ಬಹರೇನ್‌ನಲ್ಲಿ ಗಲ್ಫ್ ಯಕ್ಷ ವೈಭವ
ಮಂಗಳೂರು, ಜು. 20: ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಬಹರೇನ್ ವತಿಯಿಂದ ಯಕ್ಷಗಾನದ ಪ್ರಸಿದ್ಧ ಕಲಾವಿದರನ್ನೊಳಗೊಂಡ ತಂಡದಿಂದ ಗಲ್ಫ್ ಯಕ್ಷ ವೈಭವ ಕಾರ್ಯಕ್ರಮ ಸೆ. 10 ಮತ್ತು 11ರಂದು ಮನಾಮಾ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಟಿ.ರಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುವ ಸಂಘವು ಪ್ರತಿ ವರ್ಷ ಯಕ್ಷ ವೈಭವವನ್ನು ನಡೆಸುತ್ತಾ ಬಂದಿದೆ. ಈ ಬಾರಿ ಬಹರೇನ್ ತಂಡದೊಂದಿಗೆ ಸೌದಿ ಅರೇಬಿಯಾ ಮತ್ತು ದುಬೈನ ಕಲಾವಿದರೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದರಿಂದ ಗಾನವೈಭವ, ವಾದ-ಸಂವಾದ ಮತ್ತು ಯಕ್ಷೋಪಾಸನ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸಂಘದ ಯಕ್ಷಗಾನ ಚಟುವಟಿಕೆಗಳ ಕುರಿತ ಸ್ಮರಣ ಸಂಚಿಕೆ ಅನಾವರಣಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದರಾಗಿ ತೆಂಕುತಿಟ್ಟಿನ ಸತೀಶ್ ಶೆಟ್ಟಿ ಪಟ್ಲ, ಪ್ರಸಾದ ಬಲಿಪ, ರವಿರಾಜ ಭಟ್ ಪನೆಯಾಲ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಚೈತನ್ಯ ಪದ್ಯಾಣ, ಬಡಗು ತಿಟ್ಟಿನ ರಾಘವೇಂದ್ರ ಆಚಾರ್ಯ ಜನ್ಸಾಲೆ, ಗೋಪಾಲ ಆಚಾರ್ಯ ತೀರ್ಥಹಳ್ಳಿ, ಶಿವಾನಂದ ಕೋಟ, ಸುನೀಲ್ ಭಂಡಾರಿ ಕಡತೋಕ, ಕಾರ್ತಿಕ್ ಹೆಗ್ಡೆ ಚಿಟ್ಟಾಣಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಯಕ್ಷಗಾನ ಸಲಹೆಗಾರ ರಮೇಶ್ ಮಂಜೇಶ್ವರ, ಉಪ ಮನೋರಂಜನಾ ಕಾರ್ಯದರ್ಶಿ ವರುಣ್ ಹೆಗ್ಡೆ, ಉಪಕಾರ್ಯದರ್ಶಿ ಅರುಣ್ ಐರೋಡಿ, ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಉಪಸ್ಥಿತರಿದ್ದರು.