ಜು. 23: ಸಚಿವ ಪ್ರಮೋದ್ ಮಧ್ವರಾಜ್‌ಗೆ ಅಭಿನಂದನೆ
ಮಂಗಳೂರು, ಜು. 20: ದ.ಕ.ಜಿಲ್ಲಾ ಸಮಸ್ತ ಮೊಗವೀರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮೊಗವೀರ ಯುವ ವೇದಿಕೆಯ ಸಂಚಾಲಕತ್ವದಲ್ಲಿ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಸಮಸ್ತ ಮೊಗವೀರರ ಪರವಾಗಿ ಅಭಿನಂದನಾ ಸಮಾರಂಭ ಜು. 23ರಂದು ಬೆಳಗ್ಗೆ 10ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ 14 ಪಟ್ಲ ಮೊಗವೀರ ಸಂಯುಕತಿ ಸಭೆಯ ಅಧ್ಯಕ್ಷ ರಾಜೀವ್ ಕಾಂಚನ್, ಮೊಗವೀರ ಸಮಾಜದ ಮುಖಂಡರಾಗಿ, ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಪ್ರಮೋದ್ ಮಧ್ವರಾಜ್ ಇದೀಗ ರಾಜ್ಯದ ಸಚಿವರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಅಭಿನಂದನೆ ನಡೆಯಲಿದೆ. ಜತೆಗೆ ಸಮಾರಂಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ಉಡುಪಿ ಶ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ. ಜಿ.ಶಂಕರ್ ಉದ್ಘಾಟಿಸಲಿದ್ದು, ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಹೊಸಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ಸಚಿವ ಯು.ಟಿ.ಖಾದರ್, ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕರಾದ ಅಭಯಚಂದ್ರ ಜೈನ್, ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮೇಯರ್ ಎಂ.ಹರಿನಾಥ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಪ್ರಮುಖರಾದ ಅಜಿತ್ ಕುಮಾರ್ ರೈ ಮಾಲಾಡಿ, ಬಿ.ಹಿರಿಯಣ್ಣ ಟಿ, ಯಶ್‌ಪಾಲ್ ಸುವರ್ಣ, ಲಾಲಾಜಿ ಮೆಂಡನ್, ರಾಜೀವ್ ಕಾಂಚನ್, ಯಾದವೇಶ್ ಹೊಸಬೆಟ್ಟು, ವಿಜಯಕುಮಾರ್ ಶೆಟ್ಟಿ, ಲೀಲಾಧರ್ ತಣ್ಣೀರುಬಾವಿ, ಸರಳ ಕಾಂಚನ್, ಅಹಲ್ಯ ಎಸ್.ಕಾಂಚನ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯುವ ವೇದಿಕೆಯ ಅಧ್ಯಕ್ಷ ಲೀಲಾಧರ್ ತಣ್ಣೀರುಬಾವಿ, 7 ಪಟ್ಣ ಮಾಜಿ ಅಧ್ಯಕ್ಷ ಯಶವಂತ ಮೆಂಡನ್, ರಂಗ ನಟ ವಿ.ಜಿ.ಪಾಲ್, ಚೇತನ್ ಬೆಂಗ್ರೆ ಉಪಸ್ಥಿತರಿದ್ದರು.