×
Ad

ಯುಎಇಗೆ 78.5 ಕೋಟಿ ಡಾಲರ್ ಮೊತ್ತದ ಬಾಂಬ್‌ಗಳ ಮಾರಾಟ: ಅಮೆರಿಕ ಅನುಮೋದನೆ

Update: 2016-07-20 19:49 IST

ವಾಶಿಂಗ್ಟನ್, ಜು. 20: ಐಸಿಸ್ ವಿರುದ್ಧದ ಅಮೆರಿಕ ನೇತೃತ್ವದ ಅಭಿಯಾನದ ಭಾಗವಾಗಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ 78.5 ಕೋಟಿ ಡಾಲರ್ ವೆಚ್ಚದ ಬಾಂಬ್‌ಗಳನ್ನು ಮಾರಾಟ ಮಾಡುವ ಪ್ರಸ್ತಾಪಕ್ಕೆ ಅಮೆರಿಕದ ವಿದೇಶಾಂಗ ಇಲಾಖೆ ಅನುಮೋದನೆ ನೀಡಿದೆ ಎಂದು ಪೆಂಟಗನ್ ಮಂಗಳವಾರ ಹೇಳಿದೆ.

ಮಾರಾಟಕ್ಕೆ ಅನುಮೋದನೆ ಲಭಿಸಿದೆ ಎಂಬುದಾಗಿ ವಿದೇಶಗಳಿಗೆ ಶಸ್ತ್ರ ಮಾರಾಟಕ್ಕೆ ಅನುವು ಮಾಡಿಕೊಡುವ ಡಿಫೆನ್ಸ್ ಸೆಕ್ಯುರಿಟಿ ಕೋಪರೇಶನ್ ಏಜನ್ಸಿ ಮಂಗಳವಾರ ಸಂಸದರಿಗೆ ತಿಳಿಸಿದೆ ಎಂದು ಹೇಳಿಕೆಯೊಂದು ತಿಳಿಸಿದೆ.

ಮಾರಾಟವನ್ನು ತಡೆಯಲು ಸಂಸದರಿಗೆ 30 ದಿನಗಳ ಕಾಲಾವಕಾಶವಿದೆ. ಆದಾಗ್ಯೂ, ಯಾವುದೇ ಔಪಚಾರಿಕ ಅಧಿಸೂಚನೆ ಹೊರಡಿಸುವ ಮುನ್ನ ಒಪ್ಪಂದಗಳನ್ನು ಜಾಗರೂಕತೆಯಿಂದ ಪರಿಶೀಲನೆ ನಡೆಸಲಾಗುವುದರಿಂದ ತಡೆಯುಂಟು ಮಾಡುವ ಕ್ರಮಗಳು ಅಪರೂಪವಾಗಿದೆ.

ಪ್ರಸ್ತುತ ಮಾರಾಟ ಒಪ್ಪಂದದಲ್ಲಿ 14,640 ಬಾಂಬ್‌ಗಳು ಮತ್ತು ಮಾರ್ಗದರ್ಶಿ ಕಿಟ್‌ಗಳು ಹಾಗೂ ಸ್ಫೋಟಕಗಳು ಒಳಗೊಂಡಿವೆ.

ಸಿರಿಯ ಮತ್ತು ಇರಾಕ್‌ಗಳ ಹಲವು ಭಾಗಗಳನ್ನು ಆಕ್ರಮಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಲ್ಲಿ ಯುಎಇಯನ್ನು ಮಹತ್ವದ ಸುನ್ನಿ ಅರಬ್ ಮಿತ್ರಪಕ್ಷವನ್ನಾಗಿ ಅಮೆರಿಕ ಪರಿಗಣಿಸಿದೆ.

ಯುಎಇಯ ಅಲ್ ದಾಫ್ರ ವಾಯು ನೆಲೆಯಲ್ಲಿ ಸುಮಾರು 3,500 ಅಮೆರಿಕದ ಸೈನಿಕರಿದ್ದಾರೆ ಹಾಗೂ ಭಯೋತ್ಪಾದಕರ ವಿರುದ್ಧ ಬಳಸುವ ಯುದ್ಧ ಹಾಗೂ ಬೇಹುಗಾರಿಕಾ ವಿಮಾನಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News