×
Ad

ರಿಪಬ್ಲಿಕನ್ ಅಭ್ಯರ್ಥಿಯಾಗಿ ಟ್ರಂಪ್ ಅಧಿಕೃತ ನೇಮಕ

Update: 2016-07-20 21:14 IST

ಕ್ಲೀವ್‌ಲ್ಯಾಂಡ್ (ಅಮೆರಿಕ), ಜು. 20: ರಿಪಬ್ಲಿಕನ್ ಪಕ್ಷದ ಪ್ರತಿನಿಧಿಗಳು ಮಂಗಳವಾರ ರಾತ್ರಿ ಇಲ್ಲಿ ಸಭೆ ಸೇರಿ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್‌ರನ್ನು ಔಪಚಾರಿಕವಾಗಿ ನೇಮಿಸಿದರು.
ಟ್ರಂಪ್ ಸಂಜೆ 7:12ರ ವೇಳೆಗೆ ನಾಮನಿರ್ದೇಶನಕ್ಕೆ ಅಗತ್ಯವಾದ 1,237 ಪ್ರತಿನಿಧಿಗಳ ಗಡಿಯನ್ನು ಔಪಚಾರಿಕವಾಗಿ ತಲುಪಿದರು.
ನಾಮನಿರ್ದೇಶನಕ್ಕೆ ಅಗತ್ಯವಾದ ಕೊನೆಯ ಮತವನ್ನು ಟ್ರಂಪ್‌ರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಚಲಾಯಿಸಿದರು. ಇದೇ ಸಂದರ್ಭದಲ್ಲಿ ಜೂನಿಯರ್ ಟ್ರಂಪ್ ನ್ಯೂಯಾರ್ಕ್ ನಿಯೋಗದ ಪರವಾಗಿ ಮಾತನಾಡಿದರು.
‘‘ನನ್ನ ಮತದ ಮೂಲಕ ಡೊನಾಲ್ಡ್ ಟ್ರಂಪ್ ಬೆಂಬಲಿತ ಪ್ರತಿನಿಧಿಗಳ ಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆದಿರುವುದು ನನಗೆ ದೊರೆತ ಗೌರವವಾಗಿದೆ’’ ಎಂದು ಹೇಳಿದ ಅವರು, ‘‘ಅಭಿನಂದನೆಗಳು ಅಪ್ಪ, ನಾವು ನಿಮ್ಮನ್ನು ಪ್ರೀತಿಸುತ್ತೇವೆ’’ ಎಂದರು.
ಬಳಿಕ ಸಭಿಕರು ಚಪ್ಪಾಳೆ ತಟ್ಟಿ ಹರ್ಷವನ್ನು ವ್ಯಕ್ತಪಡಿಸಿದರು.
ಪ್ರೈಮರಿಯಲ್ಲಿ ಟ್ರಂಪ್ ದಾಖಲಿಸಿದ ನಿರಂತರ ವಿಜಯಗಳ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗುವುದು ತುಂಬಾ ಹಿಂದೆಯೇ ಖಚಿತವಾಗಿತ್ತು.


ಶ್ರೇಷ್ಠ ಗೌರವ: ಡೊನಾಲ್ಡ್ ಟ್ರಂಪ್

 ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವುದು ತನಗೆ ಲಭಿಸಿದ ‘‘ಶ್ರೇಷ್ಠ ಗೌರವ’’ವಾಗಿದೆ ಎಂದು ಬಿಲಿಯಾಧೀಶ ಉದ್ಯಮಿ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದರು.
‘‘ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗುವುದು ಅತ್ಯಂತ ದೊಡ್ಡ ಗೌರವವಾಗಿದೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಹಾಗೂ ನಿಮ್ಮನ್ನೆಂದು ನಿರಾಶೆಗೊಳಿಸುವುದಿಲ್ಲ! ಅಮೆರಿಕ ಫಸ್ಟ್’’ ಎಂಬುದಾಗಿ ತನ್ನ ಸುಮಾರು ಒಂದು ಕೋಟಿ ಅನುಯಾಯಿಗಳಿಗೆ ಟ್ರಂಪ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News