×
Ad

ವಿಟ್ಲ: ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಜಿಲ್ಲಾ ಎಸ್ಪಿ ಸೂಚನೆ

Update: 2016-07-20 22:47 IST

ವಿಟ್ಲ,ಜು.20 : ಬಂಟ್ವಾಳ ತಾಲೂಕಿನ ಬಿ ಸಿ ರೋಡು ಸರ್ವಿಸ್ ರಸ್ತೆಯ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಜಿಲ್ಲಾ ಎಸ್ಪಿ ಅವರ ಸೂಚನೆಯಂತೆ ಮತ್ತೆ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ರಂಗಕ್ಕಿಳಿದಿದ್ದಾರೆ. ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ನಿತ್ಯ ಉಂಟಾಗುತ್ತಿರುವ ಸಂಚಾರ ನಿಬಿಡತೆಯ ಬಗ್ಗೆ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಎಸ್ಪಿ ಭೂಷಣ್ ಜಿ ಬೊರಸೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ ತಕ್ಷಣ ಪರಿಹಾರ ಕ್ರಮಕ್ಕಾಗಿ ಹೆದ್ದಾರಿ ಪ್ರಾಧಿಕಾರ ಹಾಗೂ ಪುರಸಭೆಗೆ ಸೂಚಿಸಿದ್ದರು.

        ಈ ಹಿನ್ನಲೆಯಲ್ಲಿ ಸೋಮವಾರ ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ಬಸ್ ಬೇ ನಿರ್ಮಿಸಲು ಕಾಮಗಾರಿ ಪ್ರಾರಂಭಗೊಂಡಿತ್ತು. ಈ ಕಾಮಗಾರಿಯ ಮೇಲುಸ್ತುವಾರಿಯನ್ನು ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಅವರೇ ನಿರ್ವಹಿಸುತ್ತಿದ್ದು, ಬುಧವಾರ ಸಂಜೆ ಮೆಸ್ಕಾಂ ಜೆಇ ಸುಬ್ರಹ್ಮಣ್ಯ ಭಟ್ ಅವರನ್ನು ಸ್ಥಳಕ್ಕೆ ಕರೆಸಿ ಇಲ್ಲಿರುವ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳನ್ನು ತಕ್ಷಣ ತೆರವುಗೊಳಿಸಿ ಸಹಕರಿಸುವಂತೆ ಕೋರಿಕೊಂಡರು. ಅಲ್ಲದೆ ತಾಲೂಕಿನ ವಿವಿಧೆಡೆ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿರುವ ರಸ್ತೆ ಬದಿಯಲ್ಲಿನ ಎಲ್ಲಾ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳನ್ನು ತೆರವುಗೊಳಿಸುವಂತೆ ಲಿಖಿತವಾಗಿ ಕೋರಿಕೆ ಪತ್ರ ನೀಡಿದರು.

ಸ್ಥಳೀಯರ ವಾದ

 ಬಸ್‌ಬೇ ನಿರ್ಮಾಣಕ್ಕಾಗಿ ಇಲ್ಲಿನ ರಸ್ತೆಯಲ್ಲಿ ಮಳೆಗಾಲದಲ್ಲಿ ಅಗೆತ ಕಾಮಗಾರಿ ನಡೆಸಿರುವುದರಿಂದ ಕೆಸರಿನ ಸಮಸ್ಯೆ ಉಂಟಾಗಿದ್ದು, ತಕ್ಷಣ ಈ ಕಾಮಗಾರಿಯನ್ನು ಪೂರ್ತಿಗೊಳಿಸಿ ಕೆಸರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸ್ಥಳೀಯ ಸಾರ್ವಜನಿಕರು ಎಸ್ಸೈ ಅವರೊಂದಿಗೆ ಈ ಸಂದರ್ಭ ವಾದ ನಡೆಸಿದರು. ಈ ವೇಳೆ ಪ್ರತಿಕ್ರಯಿಸಿದ ಎಸ್ಸೈ ಅಭಿವೃದ್ದಿ ಕಾಮಗಾರಿ ನಡೆಯುವಾಗ ಸಣ್ಣಪುಟ್ಟ ಸಮಸ್ಯೆಗಳು ಸಹಜವಾಗಿದ್ದು, ಮೆಸ್ಕಾಂ ಇಲಾಖೆ ತಕ್ಷಣ ಸ್ಪಂದಿಸಿದರೆ ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News