ರಾಷ್ಟ್ರಧ್ವಜಕ್ಕೆ ಅಪಮಾನದ ವಿರುದ್ಧ ದೂರು
Update: 2016-07-20 23:48 IST
ಮಂಗಳೂರು, ಜು.19: ತಾಲೂಕಿನ ವಿವಿಧ ಸರಕಾರಿ ಕಚೇರಿಗಳ ಬಳಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗುತ್ತಿದೆ. ಧ್ವಜ ಸಂಹಿತೆಯನ್ನು ಉಲ್ಲಂಘಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಂಬ್ಲಮೊಗರು ಡಿವೈಎಫ್‌ಐ ಮದಕ ಘಟಕದ ಅಧ್ಯಕ್ಷ ಇಬ್ರಾಹೀಂ ಅಂಬ್ಲಮೊಗರು ದ.ಕ. ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಅಂಬ್ಲಮೊಗರು ಗ್ರಾಪಂ ಸಮೀಪದ ಗ್ರಂಥಾಲಯದ ಬಳಿ ಇದ್ದ ಧ್ವಜ ಸ್ತಂಭವನ್ನು ಅಗೆದು ಪಂಚಾಯತ್ ಕಟ್ಟಡದ ಗೋಡೆಗೆ ಹಗ್ಗದಲ್ಲಿ ಕಟ್ಟಲಾಗಿದೆ. ಈ ಬಗ್ಗೆ ದೂರು ನೀಡಿ ಒಂದೂವರೆ ತಿಂಗಳಾದರೂ ಯಾವುದೇ ಕ್ರಮಕೈಗೊಂಡಿಲ್ಲ. ಉಳ್ಳಾಲ ಪುರಸಭೆಯ ಬಳಿಯ ಕಟ್ಟಡದಲ್ಲಿ ಧ್ವಜಸ್ತಂಭ ಇದ್ದರೂ ಅದರಲ್ಲಿ ಧ್ವಜ ಹಾರಾಡುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಬ್ರಾಹೀಂ ಆಗ್ರಹಿಸಿದ್ದಾರೆ.