ಭಾರತದಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಳ: ಎಸ್ಪಿ ಅಣ್ಣಾಮಲೈ
ಮಣಿಪಾಲ, ಜು.20: ಭಾರತದಲ್ಲಿ ಕಳೆದ ವರ್ಷ ನಾಲ್ಕು ಲಕ್ಷ ಅಪಘಾತಗಳು ಸಂಭವಿಸಿದ್ದು, 1.5 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತಿ ಹೆಚ್ಚಿನ ಅಪಘಾತ ಗಳು ಸಂಭವಿಸುತ್ತಿರುತ್ತವೆ. ಮಾತ್ರವಲ್ಲದೆ ದಿನದಿಂದ ದಿನಕ್ಕೆ ಅಪಘಾತ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ತಿಳಿಸಿದ್ದಾರೆ.ಉಡುಪಿ ರೋಟರಿ ಕ್ಲಬ್ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಯುವಜನತೆಗೆ ಅಪಘಾತ ಮತ್ತು ಪ್ರಾಥಮಿಕ ಚಿಕಿತ್ಸಾ ನಿರ್ವಹಣೆಯ ಅರಿವು ‘ಜೀವ ಉಳಿಸಿ’ ಅಭಿಯಾನ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅತಿಯಾದ ವೇಗ, ಅಜಾಗರೂಕತೆ ಮತ್ತು ಮದ್ಯಪಾನ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ತಮ್ಮ ಜೀವ ಮಾತ್ರವಲ್ಲದೆ ಇನ್ನೊಂದು ಜೀವಕ್ಕೂ ಹಾನಿ ಎಸಗಲಾಗುತ್ತದೆ. ಈ ಬಗ್ಗೆ ಅರಿವು, ಜಾಗೃತಿ ನಮ್ಮಲ್ಲಿದ್ದರೆ ಅಪಘಾತಗಳ ಸಂಖ್ಯೆ ಇಳಿಮುಖವಾಗುತ್ತದೆ. ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಗಳನ್ನು ಪಾಲಿಸಿ ವಾಹನ ಚಾಲನೆ ಮಾಡಬೇಕು ಎಂದರು.ರೋಟರಿ ಸಹಾಯಕ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ, ಕಾಲೇಜಿನ ಆಡಳಿತಾಧಿಕಾರಿ ಪಿ.ದಯಾನಂದ್ ಶೆಟ್ಟಿ, ಪ್ರಾಂಶುಪಾಲೆ ರಾಧಿಕಾ ಪೈ, ಕ್ಲಬ್‌ನ ಡಾ.ಪ್ರಭಾಕರ ಮಲ್ಯ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯ ಸರಸ್ವತಿ ಕಾಮತ್, ಡಾ.ಸುರೇಶ್ ಶೆಣೈ ಉಪಸ್ಥಿತರಿದ್ದರು. ಜಯಲಕ್ಷ್ಮೀ ಸ್ವಾಗತಿಸಿದರು. ಶ್ರೀನಿವಾಸ್ ಉಪಾಧ್ಯ, ಕಾರ್ಯಕ್ರಮ ನಿರೂಪಿಸಿದರು.