×
Ad

" ಸಿಆರ್ ಪಿ ಎಫ್ ನಿಂದ ಲೈಂಗಿಕ ದೌರ್ಜನ್ಯ, ಸೊತ್ತು ನಾಶ ಆಗಿದ್ದು ಹೌದು"

Update: 2016-07-21 16:02 IST

ಶ್ರೀನಗರ, ಜು.21: ಸಿ ಆರ್ ಪಿ ಎಫ್ ಜವಾನರು ಯುವತಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದ  ಘಟನೆಯನ್ನು ವರದಿ ಮಾಡಿದ ಸ್ಥಳೀಯ ಪತ್ರಿಕೆಯನ್ನು ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿಯೊಬ್ಬರು ಬೆಂಬಲಿಸಿರುವುದು ಸಿಆರ್ ಪಿಎಫ್ ಮತ್ತು ರಾಜ್ಯ ಪೊಲೀಸರ ನಡುವೆ ಮತ್ತಷ್ಟು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದೆಂದು ಶಂಕಿಸಲಾಗಿದೆ.

``ಅಸೌಖ್ಯ ಮಹಿಳೆಯೊಬ್ಬಳನ್ನು ಶ್ರೀನಗರದ ವೈದ್ಯರಲ್ಲಿಗೆ ಕರೆದೊಯ್ಯುತ್ತಿದ್ದ  ಆಕೆಯ ಪುತ್ರ ಹಾಗೂ ಪುತ್ರಿಯನ್ನು ತಡೆದ ಸಿ ಆರ್ ಪಿ ಎಫ್ ಜವಾನರು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಆಕೆಯ ಸಹೋದರನನ್ನು ಹಿಂಸಿಸಿ ಆತನನ್ನು ಸಾಯಿಸಲು  ಕೊಂಡೊಯ್ದರು.  ಅವರ ಅಸಹಾಯಕ ತಾಯಿ ತಮ್ಮನ್ನು ಬಿಟ್ಟು ಬಿಡುವಂತೆ ಕೇಳಿಕೊಂಡರೂ ಆಕೆಯನ್ನು ನಿಂದಿಸಿ ಒದೆಯಲಾಯಿತು. ನಂತರ ಸ್ಥಳೀಯ ಪೊಲೀಸರ ಮಧ್ಯ ಪ್ರವೇಶದಂದ ಯುವಕನ ಜೀವ ಹಾಗೂ ಯುವತಿಯ ಮಾನ ಉಳಿಯಿತು,'' ಎಂದು ಜುಲೈ 16 ರ ಸಂಚಿಕೆಯಲ್ಲಿ ದಿ ಕಾಶ್ಮೀರ್ ರೀಡರ್ ವರದಿ ಮಾಡಿತ್ತು.

ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಯಾಗಿತ್ತು. ``ನನ್ನ ಪುತ್ರನನ್ನು ಕಾರಿನಿಂದ ಹೊರ ಬರುವಂತೆ  ಸಿ ಆರ್ ಪಿ ಎಫ್ ಮಂದಿ ಹೇಳಿದಾಗ ನನ್ನ ತಲೆ ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು. ಆತ ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಬೇಡಿದೆ. ನಾನು ನೋಡನೋಡುತ್ತಿದ್ದಂತೆಯೇ  ಅವರು ಕಾರಿನ ಕಿಟಿಕಿ ಗಾಜನ್ನು ಪುಡಿಗಟ್ಟಿದರು. ನಂತರ ನನ್ನ ಪುತ್ರಿಯನ್ನು ಹೊರಗೆಳೆದ ಅವರು ನನಗೆ ಒದೆದರು. ಆಗ ಕೆಲ ಕಾಶ್ಮೀರಿ ಪೊಲೀಸರು ಬಂದು ಸಿ ಆರ್ ಪಿ ಎಫ್ ಜವಾನರೊಂದಿಗೆ ಜಗಳಕ್ಕಿಳಿದರು. ಪೊಲೀಸರು ನನ್ನನ್ನು ಅವರ ಕಾರಿನ ಬಳಿಗೊಯ್ದರು.  ಒಬ್ಬ ಪೊಲೀಸ್ ಸಿಬ್ಬಂದಿ ಇನ್ನೂ ನಮ್ಮ ಕಾರಿನಲ್ಲಿ ಕಿರುಚಾಡುತ್ತಿದ್ದ ನನ್ನ ಪುತ್ರಿಯನ್ನು ಕಾಪಾಡಲು ಹೋದರು. ಸಿ ಆರ್ ಪಿ ಎಫ್ ಅಧಿಕಾರಿಯೊಬ್ಬ ಆ ವಾಹನದಿಂದಿಳಿದು ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿ ಅವರ ವಿಚಾರದಲ್ಲಿ ಹಸ್ತಕ್ಷೇಪ ನಡೆಸದಂತೆ ಹೇಳಿದರು. ಹುಡುಗಿಯನ್ನು ಬಿಟ್ಟು ಬಿಡುವಂತೆ ಹೇಳಿದ ಮೇಲೆ ಅವರು ಆಕೆಯನ್ನು ವಾಹನದಿಂದ ಹೊರಗೆಸೆದರು,'' ಎಂದು ಹಮೀದಾ ವಿವರಿಸಿದ್ದನ್ನು ಪತ್ರಿಕೆೆ ವರದಿ ಮಾಡಿದೆ.

ಆ ನೊಂದ ಕುಟುಂಬ ರಾಜ್ಯವನ್ನೇ ಬಿಟ್ಟು ತೆರಳಿದೆ ಎಂದು ಈ ವರದಿ ತಯಾರಿಸಿದ ಪತ್ರಕರ್ತ ಉಮರ್ ಮುಷ್ತಾಕ್ ಹೇಳಿದ್ದಾರೆಂದು  ಕ್ಯಾರವಾನ್ ವರದಿ ಮಾಡಿದೆ.

ಆದರೆ ಸಿ ಆರ್ ಪಿ ಎಫ್ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ರಾಜೇಶ್ ಯಾದವ್ ತಮಗೆ ಈ ಘಟನೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News