ಗಿಡ, ಮರಗಳ ಮೇಲೆ ಪ್ರೀತಿ ಇರಲಿ: ಮೀನಾಕ್ಷಿ ಶಾಂತಿಗೋಡು
ಪುತ್ತೂರು, ಜು.21: ಮರಗಿಡಗಳನ್ನು ಬೆಳೆಸಿದರೆ ನಮ್ಮ ವಾತಾವರಣವು ಉತ್ತಮವಾಗಿರುವುದಲ್ಲದೆ ನೀರಿನ ಅಭಾವವನ್ನು ಕಡಿಮೆ ಮಾಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯು ನೀರಿನ ಅಭಾವವನ್ನು ಈ ಬಾರಿ ಕಂಡಿದೆ. ಆದುದರಿಂದ ಜಲ ಮರುಪೂರಣವನ್ನು ಮಾಡಿದರೆ ನೀರಿನ ಅಭಾವವನ್ನು ತಪ್ಪಿಸಬಹುದು ಆದುದರಿಂದ ಗಿಡಮರಗಳನ್ನು ಬೆಳೆಸಿ ಅದನ್ನು ಚೆನ್ನಾಗಿ ಪೋಷಿಸಿದರೆ ಯಾವ ಸಮಸ್ಯೆಗಳು ಬರುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರ ಹಮ್ಮಿಕೊಂಡ ಕೋಟಿವೃಕ್ಷ ಅಭಿಯಾನವನ್ನು ತಾವೆಲ್ಲಾ ಯಶಸ್ವಿಗೊಳಿಸಬೇಕೆಂದು ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆಯಲ್ಲಿ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆರ್ಲಪದವು ಮತ್ತು ಪಾಣಾಜೆ ಶಾಲಾ ಸಂಯುಕ್ತ ಆಶ್ರಯದಲ್ಲಿ ನಡೆದ ಕೋಟಿವೃಕ್ಷ ಅಭಿಯಾನದ ಪ್ರಯುಕ್ತ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಮಾಲ ವಿ.ಎನ್. ಚಾರಿಟೇಬಲ್ ಟ್ರಸ್ಟ್ ಶಾಲೆಗೆ ನೀಡಿದ ಗಡಿಯಾರ, ಛೇರ್ ಮತ್ತು ಕಸದ ಬುಟ್ಟಿ ವಿತರಿಸಿದರು. ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ್ ಸಾಂಕೇತಿಕವಾಗಿ ಸಸಿ ವಿತರಿಸಿದರು.
ದ.ಕ.ಜಿಪಂ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಇದರ ಶಾಲಾಭಿವೃದ್ದಿ ಸಮಿತಿಯ ನಿರ್ಗಮನ ಅಧ್ಯಕ್ಷ ಸತ್ಯನಾರಾಯಣ ಅಡಿಗ ಮತ್ತು ಸದಸ್ಯರಿಗೆ ವಿದಾಯ ಕೂಟ ಹಾಗೂ ನೂತನ ಸಮಿತಿಯ ಪದಗ್ರಹಣ ಸಮಾರಂಭವನ್ನು ಈ ಸಂದರ್ಭದಲ್ಲಿ ನಡೆಸಲಾಯಿತು.
ದ.ಕ.ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸದಾಶಿವ ರೈ ಸೂರಂಬೈಲು, ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸದಸ್ಯ ಶಿವಾನಂದ ಮಣಿಯಾಣಿ , ಸ್ನೇಹ ಜನರಲ್ ಸ್ಟೋರ್ಸ್‌ನ ಮಾಲಕ ವರದರಾಯ ನಾಯಕ್, ಬೆಟ್ಟಂಪಾಡಿ ಕ್ಲಸ್ಟರ್ ಸಿಆರ್‌ಪಿ ಜನಾರ್ಧನ ಅಲ್ಚಾರ್, ಶಾಲಾ ಮುಖ್ಯ ಶಿಕ್ಷಕಿ ಕೆ.ಶೀಲಾವತಿ, ಪಾಣಾಜೆ ಪ್ರಾ.ಕೃ.ಪ.ಸ.ಸಂಘ ದ ನಿರ್ದೇಶಕ ರವೀಂದ್ರ ಭಂಡಾರಿ ಬೈಂಕ್ರೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಅಬೂಬಕರ್ ಆರ್ಲಪದವು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ದುರಸ್ತಿಗೆ ಅನುದಾನ ಒದಗಿಸುವಂತೆ ಕೋರಿ ಮನವಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ನೀಡಿದರು. ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ ಅಧ್ಯಕ್ಷತೆ ವಹಿಸಿದ್ದರು.
ಶ್ರೀಪ್ರಸಾದ್ ಎನ್.ಎಸ್. ಸ್ವಾಗತಿಸಿ ಪ್ರಕಾಶ್ ಕುಲಾಲ್ ವಂದಿಸಿದರು. ಶ್ರೀಹರಿ ನಡುಕಟ್ಟ ನಿರೂಪಿಸಿದರು. ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಚಂದ್ರ ಎ.ಬಿ. ಹಾಗೂ ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು ಶಾಲಾ ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.