×
Ad

ಹೆಚ್ಚುವರಿ ಶಿಕ್ಷಕರ ವರ್ಗಾವಣೆ ರದ್ದುಗೊಳಿಸಿದ ಶಿಕ್ಷಣ ಸಚಿವರು: ಹಾರಾಡಿ ಶಾಲೆಗೆ ಮರಳಿದ ವಿದ್ಯಾರ್ಥಿಗಳು

Update: 2016-07-21 18:56 IST

ಪುತ್ತೂರು, ಜು.21: ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಪುತ್ತೂರು ನಗರದ ಹಾರಾಡಿ ಸರಕಾರಿ ಉನ್ನತ ಹಿ.ಪ್ರಾ. ಶಾಲೆಗೆ ಗುರುವಾರ ವಿದ್ಯಾರ್ಥಿಗಳು ಹಾಜರಾಗಿದ್ದು ಎಂದಿನಂತೆ ತರಗತಿಗಳು ನಡೆದಿದೆ.

ಎಸ್‌ಡಿಎಂಸಿ ಪದಾಧಿಕಾರಿಗಳು, ನಗರಸಭೆ ಸದಸ್ಯೆ ಜಯಲಕ್ಷ್ಮೀ ಸುರೇಶ್ ಶಾಲೆಗೆ ಆಗಮಿಸಿ ಮುಂದಿನ ಹಾದಿಯ ಬಗ್ಗೆ ಚರ್ಚಿಸಿದರು. ಸರಕಾರ ಸೂಕ್ತ ಕ್ರಮ ಕೈಗೊಂಡರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮ. ಇಲ್ಲದೇ ಹೋದರೆ ಜುಲೈ ತಿಂಗಳ ಅಂತ್ಯಕ್ಕೆ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೇ ಇರಲು ಪೋಷಕರು ತೀರ್ಮಾನಿಸಿದರು. ಶಾಲೆಯ ಹೆಚ್ಚುವರಿ ಶಿಕ್ಷಕರನ್ನು ಇಲಾಖೆ ಬೇರೆ ಶಾಲೆಗೆ ನಿಯೋಜನೆ ಮಾಡಿರುವುದರ ವಿರುದ್ದ ಶಾಲೆಯ ಗೃಹಮಂತ್ರಿ ದಿವಿತ್ ಯು. ರೈ, ರಾಜ್ಯ ಗೃಹ ಮಂತ್ರಿ ಪರಮೇಶ್ವರ್‌ಗೆ ಕರೆ ಮಾಡಿ, ಸಮಸ್ಯೆಯ ಬಗ್ಗೆ ತಿಳಿಸಿದ ಬಳಿಕ ಒಟ್ಟು ಪ್ರಕರಣ ತಿರುವು ಪಡೆದುಕೊಂಡಿತು. ಹಾರಾಡಿ ಶಾಲೆಯ ಒಟ್ಟು ಮಾಹಿತಿ ಹಾಗೂ ಕೌನ್ಸೆಲಿಂಗ್‌ನಿಂದ ಎದುರಾದ ಸಮಸ್ಯೆಯನ್ನು ದಿವಿತ್ ತಾಯಿ ಪ್ರತಿಮಾ ಅವರಿಂದ ಪಡೆದುಕೊಂಡಿದ್ದರು. ಈ ಬಗ್ಗೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಬಳಿಯೂ ಚರ್ಚಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು. ಶಿಕ್ಷಣ ಸಚಿವರ ಆದೇಶದಂತೆ ಬೇರೆ ಶಾಲೆಗೆ ನಿಯೋಜನೆಗೊಂಡ ಹೆಚ್ಚುವರಿ ಶಿಕ್ಷಕರನ್ನು ಮತ್ತೆ ಕರೆಸಿಕೊಳ್ಳಲಾಗಿದೆ.

432 ವಿದ್ಯಾರ್ಥಿಗಳಿರುವ ಹಾರಾಡಿ ಉ.ಹಿ.ಪ್ರಾ. ಶಾಲೆಯಲ್ಲಿ 15 ಶಿಕ್ಷಕರಿದ್ದಾರೆ. 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ ಹಾಗೂ 6, 7, 8ನೆ ತರಗತಿಗೆ ತಲಾ ಒಬ್ಬರಂತೆ ಇಂಗ್ಲೀಷ್ ಮಾಧ್ಯಮ ಹಾಗೂ ಕನ್ನಡ ಮಾಧ್ಯಮಕ್ಕೆ ಶಿಕ್ಷಕರನ್ನು ಹಂಚಿ ಹಾಕಿದರೆ ಈಗಿರುವ 15 ಶಿಕ್ಷಕರು ಬೇಕೆ ಬೇಕು. ಅಲ್ಲದೆ, ಒಂದನೆ ತರಗತಿಯಿಂದ ಇಂಗ್ಲೀಷ್ ಕಲಿಸುವ ಗುಬ್ಬಚ್ಚಿ ಸ್ಪೀಕಿಂಗ್, ಕಂಪ್ಯೂಟರ್ ತರಗತಿ ಹೀಗೆ ವಿವಿಧ ಚಟುವಟಕೆಯಲ್ಲಿ ತೊಡಗಿಸಿಕೊಂಡಿದೆ. ಹಿಂದಿನ ವರ್ಷ 393 ವಿದ್ಯಾರ್ಥಿಗಳಿದ್ದ ಹಾರಾಡಿ ಶಾಲೆಯಲ್ಲಿ, ಈ ಬಾರಿ 432 ವಿದ್ಯಾರ್ಥಿಗಳು. ಶಾಲೆಗಳಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ, ಶಾಲೆಗಳು ಮುಚ್ಚಿ ಹೋಗುತ್ತಿವೆ ಎಂಬ ಮಾತಿಗೆ ಹಾರಾಡಿ ಶಾಲೆ ಅಪವಾದ. ಖಾಸಗಿ ಶಾಲೆಗಳನ್ನು ಬಿಟ್ಟು, ಹಾರಾಡಿ ಶಾಲೆಗೆ ದಾಖಲಾತಿ ಪಡೆದಿದ್ದಾರೆ.

ಹಾರಾಡಿ ಶಾಲಾ ಶಿಕ್ಷಕರಿಗೆ ವರ್ಗವಿಲ್ಲ

ಕೌನ್ಸೆಲಿಂಗ್‌ನಲ್ಲಿ ಹೆಚ್ಚುವರಿ ಎಂದು ಗುರುತಿಸಲ್ಪಟ್ಟ ನಾಲ್ವರು ಶಿಕ್ಷಕರನ್ನು ವರ್ಗಾವಣೆ ಮಾಡದೆ, ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ ಸಚಿವ ತನ್ವೀರ್ ಸೇಠ್ ಆದೇಶಿಸಿದ್ದಾರೆ.

ಹಾರಾಡಿ ಉ.ಹಿ.ಪ್ರಾ. ಶಾಲಾ ಗೃಹಮಂತ್ರಿ ದಿವಿತ್ ಯು. ರೈ, ರಾಜ್ಯ ಗೃಹಮಂತ್ರಿಗೆ ಕಳುಹಿಸಿದ ಸಂದೇಶ ಹೊಸ ಬದಲಾವಣೆಗೆ ನಾಂದಿ ಹಾಡಿದೆ. ರಾಜ್ಯ ಗೃಹಸಚಿವ ಪರಮೇಶ್ವರ್ ಅವರು, ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಬಳಿ ಮಾತುಕತೆ ನಡೆಸಿದ್ದರ ಪರಿಣಾಮ ಹಾರಾಡಿ ಶಾಲಾ ನಾಲ್ವರು ಶಿಕ್ಷಕರು ಯಥಾಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಗುರುವಾರ ಆದೇಶ ಹೊರಬಿದ್ದಿದೆ.

ಹದಿನೈದು ಶಿಕ್ಷಕರ ಪೈಕಿ ನಾಲ್ವರು ಶಿಕ್ಷಕರಾದ ಯಶೋಧಾ, ವಿಜಯಾ, ಶುಭಲತಾ, ಲಿಲ್ಲಿ ಡಿಸೋಜರನ್ನು ಹೆಚ್ಚುವರಿ ಎಂದು ಮಂಗಳವಾರ ನಡೆದ ಕೌನ್ಸೆಲಿಂಗ್‌ನಲ್ಲಿ ಗುರುತಿಸಲಾಗಿತ್ತು. ರಾಜ್ಯ ಸರಕಾರದ ಆದೇಶದಂತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲ ಕೌನ್ಸೆಲಿಂಗ್ ನಡೆಸಲಾಗಿತ್ತು. ಅಂದೇ ರಾತ್ರಿ ರಾಜ್ಯ ಗೃಹಸಚಿವರಿಗೆ ಸಮಸ್ಯೆಯ ಬಗ್ಗೆ ವಿವರಣೆ ನೀಡಿದ್ದರ ಪರಿಣಾಮ, ಶಿಕ್ಷಕರನ್ನು ಹಾರಾಡಿ ಶಾಲೆಯಲ್ಲೇ ಉಳಿಸಿಕೊಳ್ಳುವಂತೆ ಆದೇಶ ನೀಡಲಾಗಿದೆ. ಈ ಮಾಹಿತಿಯನ್ನು ಗೃಹಸಚಿವರ ಕಚೇರಿಯ ದಿನೇಶ್ ಎಂಬವರು ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ದಿವಿತ್ ರೈ ತಾಯಿ ಪ್ರತಿಮಾ ತಿಳಿಸಿದ್ದಾರೆ.

ಪ್ರತಿಭಟನೆ ಹಾಗೂ ವಿದ್ಯಾರ್ಥಿ- ಪಾಲಕರ ಮುಷ್ಕರದಿಂದಾಗಿ ಎರಡು ದಿನದ ತರಗತಿಗಳು ನಷ್ಟವಾಗಿದೆ. ಇದನ್ನು ಭರ್ತಿ ಮಾಡುವ ಬಗ್ಗೆ ಚಿಂತಿಸುತ್ತಿದ್ದೇವೆ. ಶನಿವಾರ ಮಧ್ಯಾಹ್ನದ ಬಳಿಕ ಹಾಗೂ ರಜಾ ದಿನಗಳಲ್ಲಿ ಸರಿದೂಗಿಸಲು ಪ್ರಯತ್ನಿಸುತ್ತೇವೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆಯಾಗಿದೆ ಎಂದಾಗಬಾರದು.
ಮುದರ ಎಸ್., ಮುಖ್ಯಶಿಕ್ಷಕ, ಹಾರಾಡಿ ಉ.ಹಿ.ಪ್ರಾ. ಶಾಲೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News