ಪರಿಸರ, ಹಸಿರು ಉಳಿವಿಗಾಗಿ ‘ಸೆಲ್ಫಿ’ ಅಭಿಯಾನ
ಉಡುಪಿ, ಜು.21: ಇಂದಿನ ಜನತೆಯ ಅದರಲ್ಲೂ ವಿಶೇಷವಾಗಿ ಯುವಜನತೆಯ ಕ್ರೇಜ್ ಆಗಿರುವ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸೆಲ್ಫಿ’ ತೆಗೆಯುವುದನ್ನು ಸಾಮಾಜಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಬ್ರಹ್ಮಾವರ ಸಮೀಪದ ಸಾಸ್ತಾನದ ಯುವಕರ ತಂಡ ‘ಸಾಸ್ತಾನ ಮಿತ್ರರು’ ಆರಂಭಿಸಿದ ‘ಸೆಲ್ಫಿ ವಿದ್ ಗ್ರೀನ್’ ಅಭಿಯಾನ ರೂಪ ತಳೆಯುತ್ತಿದ್ದು, ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಸಾಸ್ತಾನದ ಮಿತ್ರರು, ಪಾಂಡೇಶ್ವರದ ಗ್ರಾಮ ಕ್ಷೇಮ ಚಾರಿಟೇಬಲ್ ಟ್ರಸ್ಟ್‌ನ ಸಹಯೋಗದಲ್ಲಿ ಆರಂಭಿಸಿದ ‘ಸೆಲ್ಫಿ ವಿದ್ ಗ್ರೀನ್’ ಪರಿಸರ ಉಳಿಸುವ ಅಭಿಯಾನ. ಆಧುನಿಕ ಜಮಾನದಲ್ಲಿ ಹೆಚ್ಚಿರುವ ಸೆಲ್ಫಿ ಟ್ರೆಂಡ್‌ಗೆ ತಕ್ಕಂತೆ ಗಿಡಗಳನ್ನು ನೆಟ್ಟು ಅದರೊಂದಿಗೆ ಒಂದು ಸೆಲ್ಫಿ ತೆಗೆದು ಕಳುಹಿಸಿ ಎಂಬುದು ಈ ಅಭಿಯಾನದ ಮುಖ್ಯ ತಿರುಳು. ಹೆಚ್ಚುತ್ತಿರುವ ಭೂಮಿಯ ತಾಪಮಾನ ಹಾಗೂ ಅದಕ್ಕೆ ಪೂರಕವಾಗಿ ಉಲ್ಭಣಿಸುತ್ತಿರುವ ವಾಯುಮಾಲಿನ್ಯ ವಾತಾವರಣ. ಈ ನಡುವೆ ಕ್ಷೀಣಿಸುತ್ತಿರುವ ವೃಕ್ಷ ಸಂಕುಲಗಳಿಂದಾಗುವ ಅಪಾಯವನ್ನು ಜನತೆಗೆ ಮನವರಿಕೆ ಮಾಡಲು ಹಾಗೂ ಅದಕ್ಕೆ ಪರಿಹಾರವಾಗಿ ಸಾಸ್ತಾನ ಮಿತ್ರರು ಕಂಡುಕೊಂಡ ಮಾರ್ಗವೇ ಈ ಯೋಜನೆಯಾಗಿದೆ.
‘ಸೆಲ್ಫಿ ವಿದ್ ಗ್ರೀನ್’ ಕಾರ್ಯಕ್ರಮದ ರೂವಾರಿ ಹ.ರಾ. ವಿನಯಚಂದ್ರ. ಹಾಗೂ ಸಂಘಟಕ ಪ್ರವೀಣ್ ಯಕ್ಷಿಮಠ. ಇವರು ಸಾಮಾಜಿಕ ತಾಣಗಳ ಮೂಲಕವೇ ಪ್ರಚಾರಕ್ಕೆ ಇಳಿದರು. ‘ಒಂದು ಸಸಿ ನೆಡಿ. ಆ ಸಸಿಯೊಂದಿಗೆ ನಿಮ್ಮದೊಂದು ಸೆಲ್ಫಿ ತೆಗೆದು ಕಳುಹಿಸಿ ಬಹುಮಾನ ಗೆಲ್ಲಿ.’ ಎಂಬುದು ಇವರು ನೀಡಿದ ಪಂಥಾಹ್ವಾನ. ಸೆಲ್ಫಿ ಪೋಟೊವನ್ನು ವಾಟ್ಸಪ್ ಮೂಲಕ ಹಾಗೂ ಈಮೈಲ್ ಮೂಲಕ ಕಳುಹಿಸಬಹುದು. ಸಂಘಟಕರ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಜನತೆಯ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಈ ಅಭಿಯಾನವನ್ನು ಅನೇಕ ಗಣ್ಯರೂ ಬೆಂಬಲಿಸಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೋಟ ಠಾಣಾಧಿಕಾರಿ ಕಬ್ಬಾಳ್‌ರಾಜ್, ಕುಂದಾಪುರದ ವಕೀಲ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಸೇರಿದಂತೆ ಅನೇಕ ಮಂದಿ ಗಿಡನೆಟ್ಟು ಸೆಲ್ಫಿ ತೆಗೆದು ಪೋಟೊ ಕಳುಹಿಸಿ ಅಭಿಯಾನವನ್ನು ಬೆಂಬಲಿಸಿದ್ದಾರೆ.
ಸಂಘಟಕರ ನಿರೀಕ್ಷೆಗೂ ಮೀರಿ ಜನತೆ ಗಿಡ ನೆಟ್ಟು ಸೆಲ್ಫಿ ತೆಗೆದು ಪೋಟೊಗಳನ್ನು ಕಳುಹಿಸುತ್ತಿದ್ದಾರೆ. ಪರಿಸರದ ಮೇಲಿನ ಕಾಳಜಿಯಿಂದ ಆರಂಭಗೊಂಡ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಸಂಘಟಕ ಪ್ರವೀಣ್ ಯಕ್ಷಿಮಠ ತಿಳಿಸಿದರು. ಕಳೆದ 21 ದಿನಗಳಲ್ಲಿ 790 ಸೆಲ್ಫಿ ಪೋಟೊ ಬಂದಿದ್ದು, ಈಗೀಗ ಪ್ರತಿ ದಿನ 30ಕ್ಕೂ ಹೆಚ್ಚು ಸೆಲ್ಪಿಬರಲಾಂಭಿಸಿವೆ. ಇದು ಎಷ್ಟು ಜನಪ್ರಿಯವಾಗಿದೆ ಎಂದರೆ ಚಿಕ್ಕಬಳ್ಳಾಪುರ ಜಿಲ್ಲೆ ಆನೂರು ಗ್ರಾಮದ ಶಾಲೆಯೊಂದರ ಮಕ್ಕಳು 100 ಗಿಡಗಳನ್ನು ನೆಟ್ಟು ಪೋಟೋ ಕಳುಹಿಸಿ ಈ ಅಭಿಯಾನಕ್ಕೆ ಮೆರುಗು ತಂದಿದ್ದಾರೆ ಎಂದು ಯಕ್ಷಿಮಠ ಖುಷಿಯಿಂದ ವಿವರಿಸಿದರು.
ನಿಬಂಧನೆಗಳು
ಈ ಅಭಿಯಾನದಲ್ಲಿ ಭಾಗವಹಿಸಲು ಕೆಲವು ನಿಬಂಧನೆ ಗಳಿವೆ. ಅತೀ ಮುಖ್ಯವಾದುದು ಎಂದರೆ ಗಿಡ ನೆಟ್ಟಿರುವುದು ನೈಜತೆಯಿಂದ ಕೂಡಿರಬೇಕು. ಸಾರ್ವಜನಿಕ ಅಥವಾ ಸ್ವತಃ ಸ್ಥಳದಲ್ಲಿರಬೇಕು. ತಡೆಬೇಲಿ ನಿರ್ಮಿಸಿರಬೇಕು. ನಾಮಫಲಕ ಅಳವಡಿಸಬೇಕು ಹಾಗೂ ಗಿಡ ನೆಡುವ ಮೊದಲು ನಂತರ ಪೊಟೋ ತೆಗೆದು ಕಳುಹಿಸಬೇಕು.
ಎಲ್ಲರಿಗೂ ಅವಕಾಶ: ಈ ಅಭಿಯಾನದಲ್ಲಿ ಜು.31ರವರೆಗೆ ಭಾಗವಹಿಸಲು ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ. ನೀವೂ ಕೂಡ ಸೆಲ್ಫಿ ತೆಗೆದು ವಾಟ್ಸಪ್ ಸಂಖ್ಯೆ: 8197407570 ಅಥವಾ -sasthan576226@gmail.comಗೆ ತಮ್ಮ ವಿವರಗಳೊಂದಿಗೆ ಮೇಲ್ ಮಾಡಬಹುದು.
ಸೆಲ್ಫಿ ಹೆಸರಲ್ಲಿ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಲಾಗಿದೆ. ಅಭಿಯಾನದ ಕೊನೆಯಲ್ಲಿ ಸಾವಿರಾರು ಮಂದಿ ಗಿಡ ನೆಡುವ ನಿರೀಕ್ಷೆಯಿದೆ. ವನಮಹೋತ್ಸವ ದಂತಹ ಕಾರ್ಯಕ್ರಮದಲ್ಲಿ ಕೇವಲ ಹತ್ತಾರು ಗಿಡಗಳನ್ನು ನೆಡಬಹುದು. ಆದರೆ ಈ ಅಭಿಯಾನದ ಮೂಲಕ ಸಾವಿರಾರು ಗಿಡ ನೆಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.
ಕೊನೆಗೆ ಸೆಲ್ಫಿ ಕಳುಹಿಸದಿದ್ದರೂ ತೊಂದರೆ ಇಲ್ಲ, ಗಿಡನೆಟ್ಟು ಪೋಷಿಸಿ ಎನ್ನುತ್ತಾರೆ ಈ ಕಾರ್ಯಕ್ರಮದ ರೂವಾರಿ ಹ.ರಾ.ವಿನಯಚಂದ್ರ ಹಾಗೂ ಸಂಘಟಕ ಪ್ರವೀಣ ಯಕ್ಷಿಮಠ.