ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ : ಜನರ ಆರೋಪ
ಸುಳ್ಯ, ಜು.21: ಸುಳ್ಯ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಜನ ಸಂಪರ್ಕ ಸಭೆಯು ಸುಳ್ಯದ ಕೆವಿಜಿ ಪುಭವನದಲ್ಲಿ ಶಾಸಕ ಎಸ್.ಅಂಗಾರರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಬಾಗವಹಿಸಬೇಕಿದ್ದ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗೈರು ಹಾಜರಾಗಿದ್ದರು. ಶಾಸಕರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಇತ್ತೀಚೆಗಷ್ಟೇ ಲಾರಿ ಮೇಲೆ ಮರ ಬಿದ್ದು ಮೃತಪಟ್ಟ ಚಾಲಕ ಮುಹಮ್ಮದ್ ಮನೆಯವರಿಗೆ ಪರಿಹಾರವಾಗಿ 4 ಲಕ್ಷದ ಚೆಕ್ ವಿತರಿಸಲಾಯಿತು. 94ಸಿ ಹಕ್ಕುಪತ್ರಗಳು ಸೇರಿದಂತೆ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.
ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕೂಡಾ ನಡೆಯಿತು. ಕಲ್ಚರ್ಪೆ ಘನ ತ್ಯಾಜ್ಯ ಘಟಕದಲ್ಲಿ ಸುಳ್ಯ ನಗರದ ಕಸ ಹಾಕಲಾಗುತ್ತಿದ್ದು, ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದ ಕಾರಣ ಪರಿಸರವಿಡೀ ದುರ್ನಾತದಿಂದ ಕೂಡಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕವಿದೆ ಎಂದು ಪರಿಸರವಾಸಿಗಳು ಗಮನಸೆಳೆದರು. ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಸ್ಥಳ ಹುಡುಕಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ ಎಂದು ನಗರಪಂಚಾಯತ್ ಮುಖ್ಯಾಧಿಕಾರಿ ಹೇಳಿದರು. ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದರು.
94ಸಿ ಹಕ್ಕುಪತ್ರಕ್ಕಾಗಿ ತಾಲೂಕು ಕಚೇರಿಯಲ್ಲಿ ಹೆಚ್ಚಿನ ಹಣವನ್ನು ವಸೂಲು ಮಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದಾಗ, ನಿರ್ದಿಷ್ಟವಾಗಿ ಎಷ್ಟು ಹಣ ನೀಡಬೇಕೆಂಬ ಪಟ್ಟಿಯನ್ನು ಹಾಕುವಂತೆ ಜಿಲ್ಲಾಧಿಕಾರಿ ತಹಶೀಲ್ದಾರ್‌ರಿಗೆ ಸೂಚಿಸಿದರು. ಸಂಪಾಜೆಯಲ್ಲಿ ಘನತ್ಯಾಜ್ಯ ಘಟಕ ಹಾಗೂ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಾದ ಜಾಗಕ್ಕೆ ಅರಣ್ಯ ಇಲಾಖೆಯವರಿಂದ ಆಕ್ಷೇಪವಿದ್ದು, ಸಮಸ್ಯೆ ಪರಿಹರಿಸುವಂತೆ ಪಂಚಾಯತ್ ಪ್ರತಿನಿಧಿಗಳು ಮನವಿ ಮಾಡಿದರು. ಬಹುತೇಕ ಸಮಸ್ಯೆಗಳ ಪ್ರಸ್ತಾಪದ ಸಂದರ್ಭ ಸಾರ್ವಜನಿಕರು ಅಧಿಕರಿಗಳ ವಿರುದ್ಧ ಆರೋಪ ಮಾಡುತ್ತಿರುವುದು ಕಂಡುಬಂತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಶ್ರೀವಿದ್ಯಾ, ಸಹಾಯಕ ಕಮೀಷನರ್ ಡಾ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸದಸ್ಯರಾದ ಆಶಾ ತಿಮ್ಮಪ್ಪ, ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಎಸ್.ಎನ್.ಮನ್ಮಥ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ, ಡಿಡಿಪಿಐ ವಾಲ್ಟರ್ ಡಿ ಮೆಲ್ಲೋ, ಸುಳ್ಯ ತಹಶೀಲ್ದಾರ್ ಅನಂತಶಂಕರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಮೊದಲಾದವರಿದ್ದರು.