×
Ad

ವಿದ್ಯಾರ್ಥಿಗಳು ಸಂಪತ್ಬರಿತ ಪ್ರಜೆಯಾಗಿ ರೂಪುಗೊಳ್ಳಬೇಕು: ಪ್ರೊ.ಕೆ.ಬೈರಪ್ಪ

Update: 2016-07-21 22:03 IST

ಕೊಣಾಜೆ, ಜು.21: ಶಿಸ್ತು, ಸಂಯಮ, ಪರಿಪೂರ್ಣ ವ್ಯಕ್ತಿತ್ವದೊಂದಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಎನ್ನೆಸ್ಸೆಸ್‌ನ ಪಾತ್ರ ಮಹತ್ವಪೂರ್ಣವಾದುದು. ವಿದ್ಯಾರ್ಥಿಗಳು ಇಂತಹ ಯೋಜನೆಗಳ ಸದುಪಯೋಗವನ್ನು ಪಡೆದುಕೊಂಡು ದೇಶದ ಉತ್ತಮ ಸಂಪತ್ಬರಿತ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಬೈರಪ್ಪ ಅಭಿಪ್ರಾಯಪಟ್ಟರು.

ಮಂಗಳೂರು ವಿವಿಯ ಪುರುಷರ ವಸತಿ ನಿಲಯದಲ್ಲಿ ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಆಯ್ಕೆ ಮತ್ತು ನಾಯಕತ್ವ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

 ನಾವು ವೌಲ್ಯಾಧಾರಿತ ವಿದ್ಯೆಯೊಂದಿಗೆ ವೌಲ್ಯಾಧಾರಿತ ಗುಣವನ್ನು ಬೆಳೆಸಿಕೊಂಡು ಬಂದರೆ ಉತ್ತಮ ವ್ಯಕ್ತಿತ್ವದೊಂದಿಗೆ ದೇಶದ ಸಂಪತ್ತಾಗಿ ರೂಪುಗೊಳ್ಳಬಹುದು. ಇಂತಹ ವೌಲ್ಯಾಧಾರಿತ ಗುಣವನ್ನು ರಾಷ್ಟ್ರೀಯ ಸೇವಾ ಯೋಜನೆಯಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಗೆ ಕೇಂದ್ರ ಸರಕಾರದ ಧನಸಹಾಯ ಸಿಗುತ್ತಿದೆ. ಇದರೊಂದಿಗೆ ಇದೀಗ ರಾಜ್ಯ ಸರಕಾರವು ಕೂಡಾ ವರ್ಷಕ್ಕೆ 18 ಕೋಟಿಯಷ್ಟು ಧನ ಸಹಾಯವನ್ನು ನೀಡಿ ಪ್ರೋತ್ಸಾಹ ನೀಡುತ್ತಿದೆ ಎಂದರು.

ಶಿಬಿರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆಯ ಬೆಂಗಳೂರು ಪ್ರಾಂತೀಯ ನಿರ್ದೇಶನಾಲಯದ ಯೂತ್ ಅಧಿಕಾರಿ ಶ್ರೀಧರ್, ಇಂದು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದು ಉತ್ತಮ ಅವಕಾಶವನ್ನು ಒದಗಿಸಿಕೊಡುತ್ತಿದೆ. ಎನ್ನೆಸ್ಸೆಸ್ ನಮ್ಮಲ್ಲಿ ಸೇವಾ ಮನೋಬಾವನೆಯನ್ನು ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಣಾಜೆ ಗ್ರಾಮ ಪಂಚಾಯತ್‌ನ ಅಚ್ಯುತ ಗಟ್ಟಿ, ಲಲಿತಾ ಎಸ್.ರಾವ್, ಉದ್ಯಮಿ ಕೆ.ಕೆ.ನಾಸೀರ್, ಮಂಗಳೂರು ವಿವಿ ಪುರುಷರ ವಸತಿಗೃಹದ ನಿಲಯಪಾಲಕ ಡಾ.ಮೋಹನ್ ಸಿಂಘೆ ಮುಂತಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಪ್ರೊ.ವಿನಿತಾ ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪತ್ ಪಕ್ಕಳ ವಂದಿಸಿದರು.

ಮಂಗಳೂರು ವಿವಿಯ ಕ್ಯಾಂಪಸ್‌ನಲ್ಲಿ ಏಳು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸೇವಾ ಯೋಜನೆಯ ಆಯ್ಕೆ ಮತ್ತು ತರಬೇತಿ ಶಿಬಿರದಲ್ಲಿ ವಿವಿದ ಕಾಲೇಜುಗಳ ಒಟ್ಟು 332 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News