×
Ad

ಕೊಣಾಜೆ: ವಿಶ್ವಮಂಗಳ ಶಾಲೆಯಲ್ಲಿ ಮೂಲಿಕಾ ವನ ಉದ್ಘಾಟನೆ

Update: 2016-07-21 23:00 IST

ಕೊಣಾಜೆ, ಜು.21: ಶೇ.90ರಷ್ಟು ಗಿಡ, ಮರಗಳು ಔಷಧೀಯ ಗುಣ ಹೊಂದಿದ್ದರೂ ಅದರ ಬಳಕೆ ಬಗ್ಗೆ ಅರಿವಿನ ಕೊರತೆಯಿದೆ. ಆಟಿ ಅಮವಾಸ್ಯೆ ದಿನ ಸೇವಿಸುವ ಪಾಲೆಮರದ ಕಷಾಯ ಹಲವು ರೋಗಗಳಿಗೆ ರಾಮಬಾಣ. ಅದೇ ರೀತಿ ಮನೆಯಂಗಳದ ಸೌಂದರ್ಯ ನಿಟ್ಟಿನಲ್ಲಿ ನೆಡುವ ಕ್ರೊಟಾನ್ ಗಿಡಗಳು ವಿಷಕಾರಿ ಅಂಶ ಹೊಂದಿದ್ದು ಮಕ್ಕಳ ಪಾಲಿಗೆ ಮಾರಕ. ಶಾಲೆಗಳಲ್ಲಿ ಗಿಡ ನೆಟ್ಟು ಪೋಷಿಸಿದರೆ ಅಲ್ಲಿ ಕಲಿಯುವ ಮಕ್ಕಳಲ್ಲಿ ಗಿಡ, ಮರಗಳ ಬಗ್ಗೆ ಅಭಿರುಚಿ ಮೂಡಲು ಸಾಧ್ಯ ಎಂದು ಪಾರಂಪರಿಕ ವೈದ್ಯ ಶಂಕರಾನಂದ ಎನ್.ಇನವಳ್ಳಿ ಹೇಳಿದರು.

ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆ ವತಿಯಿಂದ ಗುರುವಾರ ನಡೆದ ಮೂಲಿಕಾ ವನ ಉದ್ಘಾಟನಾ ಸಮಾರಂದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಾವಹಿಸಿ ಅವರು ಮಾತನಾಡಿದರು.

ಮಾವು, ಹಲಸು ಸಹಿತ ಇತರ ಕೆಲವು ಹಣ್ಣುಗಳಲ್ಲಿ ಔಷಧೀಯ ಗುಣಗಳಿದ್ದರೂ ಕೆಲವು ರೋಗಗಳಿಗೆ ಮಾರಕವೂ ಆಗಿದೆ, ಈ ನಿಟ್ಟಿನಲ್ಲಿ ಯಾವುದೇ ಆಹಾರ ವಸ್ತುವನ್ನು ಔಷಧೀಯ ಗುಣ ಇದೆಯೆನ್ನುವ ಕಾರಣಕ್ಕೆ ಅಧಿಕ ಸೇವಿಸುವುದು ಸಲ್ಲದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರೊ.ಇಸ್ಮಾಯಿಲ್ ಬಿ. ಮಾತನಾಡಿ, ನಮ್ಮ ಪರಿಸರದಲ್ಲಿ ಹಲವಾರು ಔಷಧೀಯ ಮರಗಳಿದ್ದರೂ ಅದರ ಬಳಕೆ ಯಾರಿಗೂ ತಿಳಿದಿಲ್ಲ, ಹಿಂದೆ ಇದ್ದ ಬಹುತೇಕ ಔಷಧೀಯ ಮರಗಳು ನಾಶವಾಗಿದ್ದು ಅದರ ಜಾಗದಲ್ಲಿ ಅಕೇಶಿಯಾ ಮರಗಳು ಎದ್ದು ನಿಂತಿವೆ. ಇವು ಎಲ್ಲಿಂದ ಹೇಗೆ ಬಂತು, ಇದರಲ್ಲಿ ಸಿಗುವ ಲಾದ ಬಗ್ಗೆ ಯಾರಿಗೂ ಗೊತ್ತಿಲ್ಲ. ಮಾನವನ ಉಸಿರಾಟಕ್ಕೆ ಬೇಕಾಗುವ ಆಮ್ಲಜನಕ ಮರಗಳಿಂದ ಸಿಗುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಮನೆಯ ಅಂಗಳದಲ್ಲಿ ಕನಿಷ್ಠ ಎರಡು ಗಿಡ ನೆಡಬೇಕು. ಶಾಲಾ ಪರಿಸರದಲ್ಲಿ ನೆಟ್ಟ ಗಿಡಗಳನ್ನು ರಕ್ಷಿಸಿ ಪೋಷಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನದಂದು ನಡೆದ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಶಾಲೆಯ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಪ್ರೊ.ಬೋಜ ಪೂಜಾರಿ, ಕೋಶಾಧಿಕಾರಿ ತಿಮ್ಮಪ್ಪ ನಾಯ್ಕ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅಂತು ಡಿಸೋಜ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೋಬಾವತಿ ಬಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶರೀನಾ ಮೊದಲಾದವರು ಉಪಸ್ಥಿತರಿದ್ದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಎಂ. ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ದಿಲೀಪ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News