×
Ad

ಮರಳು ಮಾಫಿಯಾದಿಂದ ಪೊಲೀಸರ ಕೊಲೆಯತ್ನ

Update: 2016-07-21 23:53 IST

ಕಾಸರಗೋಡು, ಜು.21: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ ವೇಳೆ ಮರಳು ಮಾಫಿಯಾದ ತಂಡವೊಂದು ಪೊಲೀಸರ ಕೊಲೆಗೆ ಯತ್ನಿಸಿದ ಘಟನೆ ಕಾಸರಗೋಡು ಸಮೀಪದ ತಳಂಗರೆಯಲ್ಲಿ ನಡೆದಿದೆ. ಇದರಿಂದ ಕಾಸರಗೋಡು ಕರಾವಳಿ ಪೊಲೀಸ್ ಠಾಣೆಯ ವಿ.ಕೆ. ರಂಜಿತ್ (34) ಮತ್ತು ರತೀಶ್ ಚಂದ್ರನ್ (37) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
  ತಳಂಗರೆ ಪಶ್ಚಿಮ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಈ ಘಟನೆ ನಡೆದಿದೆ.
ಪೊಲೀಸರು ದಾಳಿ ನಡೆಸಿದ ಸಂದರ್ಭ ಐದು ದೋಣಿಗಳಲ್ಲಿ ಮರಳು ತುಂಬಿಸುತ್ತಿದ್ದರು. 20 ಕ್ಕೂ ಅಧಿಕ ಮಂದಿ ಮರಳುಗಾರಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ತಕ್ಷಣ ಪೊಲೀಸರು ಅಲ್ಲಿದ್ದ ದೋಣಿಯನ್ನು ವಶಪಡಿಸಲು ಮುಂದಾದಾಗ ತಂಡವು ಪೊಲೀಸರ ಮೇಲೆ ಹಲ್ಲೆ ನಡೆಸಿ ಹೊಳೆಗೆ ತಳ್ಳಿದೆ. ಈಜಿ ದಡ ಸೇರಿದ ಬಳಿಕವೂ ತಂಡವು ಪೊಲೀಸರಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದೆ. ಮಾಹಿತಿ ತಿಳಿದು ಬಳಿಕ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸರು ಇಬ್ಬರನ್ನು ಮರಳು ಮಾಫಿಯಾದಿಂದ ರಕ್ಷಿಸಿದರು. ಘಟನೆಗೆ ಸಂಬಂಧಪಟ್ಟಂತೆ 20 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇವರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News