ಮೀನೆಣ್ಣೆ ಘಟಕ ಮುಚ್ಚಲು ಹಸಿರು ಪೀಠ ಆದೇಶ
ಮಂಗಳೂರು, ಜು.21: ಉಳ್ಳಾಲದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಮೀನೆಣ್ಣೆ ಘಟಕಗಳನ್ನು ಮುಚ್ಚಲು ಹಸಿರು ಪೀಠ ಆದೇಶಿಸಿದ್ದು, 30 ದಿನದೊಳಗೆ ದಂಡ ಪಾವತಿಸುವಂತೆ ಕಾಲಮಿತಿ ನಿಗದಿಪಡಿಸಿದೆ ಎಂದು ಪಿಯುಸಿಎಲ್ ದ.ಕ. ಜಿಲ್ಲಾಧ್ಯಕ್ಷ ಎಂ.ಕಬೀರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಮಾಲಿನ್ಯ ನಡೆಸಿದ ಆರೋಪದ ಮೇಲೆ ಉಳ್ಳಾಲದ ಎಂಟು ಮೀನೆಣ್ಣೆ ಘಟಕಗಳಿಗೆ ತಲಾ ಐದು ಲಕ್ಷ ರೂ., ಐದು ಘಟಕಗಳಿಗೆ ತಲಾ ಎಂಟು ಲಕ್ಷ ರೂ. ಹಾಗೂ ಉತ್ಪಾದಕರ ಸಂಘಕ್ಕೆ 25 ಲಕ್ಷ ರೂ. ದಂಡ ವಿಧಿಸಿ ಪೀಠ ತೀರ್ಪು ನೀಡಿದೆ ಎಂದರು.
ಈ ಘಟಕಗಳು ಸಿಆರ್‌ಝೆಡ್ ವ್ಯಾಪ್ತಿಯಲ್ಲಿದ್ದು, ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿವೆ. ಮೀನು ಆಹಾರ ಮತ್ತು ಎಣ್ಣೆ ಘಟಕಗಳು ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯವನ್ನು ಉತ್ಪಾದಿಸುತ್ತಿದೆ. ಇದರಿಂದಾಗಿ ಪರಿಸರದ ಮೂರು ಕಿ.ಮೀ. ವ್ಯಾಪ್ತಿಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಕಬೀರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್ ಜಿಲ್ಲಾ ಕಾರ್ಯದರ್ಶಿ ಅಗಸ್ಟಿನ್ ರಾಡ್ರಿಗಸ್, ಸಿ. ಡಿಸೋಜ ಉಪಸ್ಥಿತರಿದ್ದರು.