ಅಕ್ರಮ ಜಾನುವಾರು ಸಾಗಾಟ ಪತ್ತೆ
Update: 2016-07-21 23:58 IST
ಬ್ರಹ್ಮಾವರ, ಜು.21: ಅಕ್ರಮವಾಗಿ 20ಕ್ಕೂ ಅಧಿಕ ದನ, ಹೋರಿಕರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕ್‌ಅಪ್ ವಾಹನವೊಂದನ್ನು ಜಾನುವಾರು ಸಮೇತ ಬ್ರಹ್ಮಾವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇಲೆ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಕೆ. ನೇತೃತ್ವದಲ್ಲಿ ಪೊಲೀಸರು ಗುರುವಾರ ಬೆಳಗ್ಗೆ 6 ಗಂಟೆಗೆ ಕೃಷಿಕೇಂದ್ರದ ಜಂಕ್ಷನ್ ಬಳಿ ಪೇತ್ರಿ ಕಡೆಯಿಂದ ಬಂದ ಪಿಕ್‌ಅಪ್ ವಾಹನದ ತಪಾಸಣೆಗೆ ನಿಲ್ಲಿಸಲು ಸೂಚನೆ ನೀಡಿದಾಗ ಚಾಲಕ ವಾಹನವನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದನೆನ್ನಲಾಗಿದೆ. ತಕ್ಷಣ ಪೊಲೀಸರು ಇಲಾಖಾ ವಾಹನದಲ್ಲಿ ಬೆನ್ನಟ್ಟಿಕೊಂಡು ಹೋದಾಗ ಅದನ್ನು ಹೇರೂರು ಗ್ರಾಮದ ದುಗ್ಗಣ್ಣಕಟ್ಟೆ ಎಂಬಲ್ಲಿ ನಿಲ್ಲಿಸಿ ಹಾಡಿಯೊಳಗೆ ಓಡಿ ತಪ್ಪಿಸಿಕೊಂಡರು. ವಾಹನವನ್ನು ತಪಾಸಣೆ ನಡೆಸಿದಾಗ ಅದರೊಳಗೆ 4 ದನ, 14 ಹೋರಿ ಕರು, 2 ಸತ್ತ ದನಗಳು ಪತ್ತೆಯಾದವು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.