ವೇಣೂರು: ಮಹಿಳೆಯಿಂದ ಹಣ ದರೋಡೆಗೈದ ಆರೋಪಿಗಳಿಗೆ 10 ವರ್ಷ ಜೈಲು

Update: 2016-07-22 11:42 GMT

ಮಂಗಳೂರು, ಜು.22: 2012ರ ವೇಣೂರು ಮಸ್ತಾಕಾಭಿಷೇಕದ ಸಂದರ್ಭದಲ್ಲಿ ಮಹಿಳೆಯೋರ್ವರ ವ್ಯಾನಿಟಿ ಬ್ಯಾಗ್ ಕಸಿದು ಹಣವನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಸ್.ಎಚ್. ಪುಷ್ಪಾಂಜಲಿ ದೇವಿ ಆದೇಶಿಸಿದ್ದಾರೆ.

ಗದಗ ಜಿಲ್ಲೆ ಬೆಟಗೇರಿಯ ಸೋಮಣ್ಣ ಮತ್ತು ಭಾಗ್ಯ ಭಜಂತ್ರಿ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಉಳಿದ 6 ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿದೆ. ದಂಡವನ್ನು ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 6 ತಿಂಗಳು ಶಿಕ್ಷೆಯನ್ನು ವಿಧಿಸಲಾಗಿದೆ.

2012 ರ ಫೆ.5 ರಂದು ಬೆಳ್ತಂಗಡಿ ತಾಲೂಕಿನ ಕೊಡಿ ಗ್ರಾಮದ ಶಶಿಕಲಾ ಎಂಬವರು ತಾಯಿ ಚಂದ್ರಾವತಿಯವರೊಂದಿಗೆ ವೇಣೂರು ಮಸ್ತಕಾಭಿಷೇಕ ವೀಕ್ಷಿಸಿ ರಾತ್ರಿ 8 ಗಂಟೆಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಲಿಮಾರ್ ಎಂಬಲ್ಲಿ ಹೊಳೆ ದಾಟಿ ಪರಾರಿಬೈಲು ಮುಖಾಂತರ ನಡೆದುಕೊಂಡು ಮನೆಗೆ ತೆರಳುತ್ತಿದ್ದಾಗ ಓರ್ವ ಮಹಿಳೆ ಸಹಿತ 8 ಜನ ಅಪರಿಚಿತರು ಅಡ್ಡಗಟ್ಟಿದ್ದರು. ಈ ಸಂದರ್ಭ ಶಶಿಕಲಾ ಅವರ ವ್ಯಾನಿಟಿ ಬ್ಯಾಗನ್ನು ಕಿತ್ತುಕೊಂಡಿತ್ತು. ವ್ಯಾನಿಟಿ ಬ್ಯಾಗ್‌ನಲ್ಲಿ 10 ಸಾವಿರ ರೂ. ನಗದು ಹಾಗೂ ಮೊಬೈಲ್ ಪೋನ್ ಇತ್ತು. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಪೊಲೀಸರು ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ 8 ಜನರನ್ನು ಬಂಧಿಸಿದ್ದರು. ಬಂಧಿತರಲ್ಲಿ ಓರ್ವ ತಲೆಮರೆಸಿಕೊಂಡಿದ್ದು, ಉಳಿದ ಏಳು ಆರೋಪಿಗಳ ವಿಚಾರಣೆ ನಡೆದು ಇಂದು ಶಿಕ್ಷೆ ಪ್ರಕಟವಾಗಿದೆ.

ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ನಾರಾಯಣ ಸೇರಿಗಾರ್.ಯು ವಾದವನ್ನು ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News