ಉಪ್ಪಿನಂಗಡಿ: ಹಿರೇಬಂಡಾಡಿ ಶಾಲೆಗೆ ಮೂರನೆ ದಿನವೂ ಮಕ್ಕಳು ಗೈರು
ಉಪ್ಪಿನಂಗಡಿ, ಜು.22: ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆ ಆದೇಶಿಸಿರುವ ಬಳಿಕ ಹಿರೇಬಂಡಾಡಿಯಲ್ಲಿರುವ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೆ ದಿನವಾದ ಶುಕ್ರವಾರ ಕೂಡಾ ಮಕ್ಕಳ ಕಲರವ ಕೇಳಿಬಂದಿಲ್ಲ. ಒಂದರಿಂದ ಏಳನೆ ತರಗತಿಯವರೆಗೆ ಇರುವ ಒಟ್ಟು 249 ಮಕ್ಕಳಲ್ಲಿ ಇಂದು ಇಬ್ಬರು ಮಕ್ಕಳಷ್ಟೇ ಶಾಲೆಗೆ ಹಾಜರಾಗಿದ್ದು, ಉಳಿದ ಎಲ್ಲಾ ಮಕ್ಕಳು ಗೈರು ಹಾಜರಾಗಿದ್ದಾರೆ.
ಇಲ್ಲಿಂದ ವರ್ಗಾವಣೆ ಆದೇಶ ಪಡೆದಿರುವ ವಿಜ್ಞಾನ ಹಾಗೂ ಕನ್ನಡ ಶಿಕ್ಷಕರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕೆಂದು ಪಟ್ಟು ಹಿಡಿದಿರುವ ಪೋಷಕರು ಶನಿವಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದರು. ಅದರಂತೆ ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಶಾಲೆಯಲ್ಲಿ ಪೋಷಕರು ಸಭೆ ನಡೆಸಿದರು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಶೌಕತ್ ಅಲಿ ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಲು ಪ್ರಯತ್ನಪಟ್ಟರೂ ಅದು ಸಫಲತೆ ಕಾಣಲಿಲ್ಲ. ಕೊನೆಗೆ ಶನಿವಾರ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳ, ಶಿಕ್ಷಣ ಇಲಾಖೆ ಅಧಿಕಾರಿಗಳ ಹಾಗೂ ಪೋಷಕರ ಸಭೆ ನಡೆಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಪೋಷಕರು ಬಂದಿದ್ದಾರೆ.
ವಿಜ್ಞಾನಕ್ಕೆ ಬೇಕೇ ಬೇಕು
ಇಲ್ಲಿನ ಇಬ್ಬರೂ ಶಿಕ್ಷಕರನ್ನು ಉಳಿಸಬೇಕು ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿ ಪೋಷಕರು, ಕೊನೆಗೆ ವಿಜ್ಞಾನ ಶಿಕ್ಷಕಿಯವರನ್ನಾದರೂ ಉಳಿಸಲೇ ಬೇಕು ಎಂದು ಒತ್ತಾಯಿಸಿದ್ದಾರೆ. ವಿಜ್ಞಾನ ಪಾಠ ಮಾಡಲು ಬದಲಿ ವ್ಯವಸ್ಥೆ ಕಲ್ಪಿಸದಿರುವುದರಿಂದ ಇಲ್ಲಿನ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರಲ್ಲದೆ, ನಮ್ಮ ಮಕ್ಕಳ ಹಿತದೃಷ್ಟಿಯಿಂದ ನಾವು ಕೇಳುವ ಬೇಡಿಕೆ ಈಡೇರದಿದ್ದರೆ ಮಕ್ಕಳ ದಾಖಲಾತಿ ಪ್ರಮಾಣ ಪತ್ರ (ಟಿಸಿ) ತೆಗೆದು ಬೇರೆ ಶಾಲೆಗೆ ಸೇರಿಸುವುದು ಅನಿವಾರ್ಯವಾದೀತೆಂದು ಎಚ್ಚರಿಕೆ ನೀಡಿದ್ದಾರೆ. ಇಂದು ಕೂಡಾ ಮಕ್ಕಳಿಲ್ಲದಿದ್ದರೂ ಶಿಕ್ಷಕರೆಲ್ಲರೂ ಶಾಲೆಗೆ ಹಾಜರಾಗಿದ್ದರು.
ಸಭೆಯಲ್ಲಿ ಸಿಆರ್‌ಪಿ ಅನಂತ, ಶಾಲಾ ಮುಖ್ಯಗುರು ಬಾಬು ಟಿ., ಗ್ರಾಮ ಪಂಚಾಯತ್ ಸದಸ್ಯರಾದ ಸೋಮೇಶ್, ಶಾಲಾ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.