×
Ad

ಉನಾ ವಿವಾದ:ಮೂವರು ದಲಿತರಿಂದ ಆತ್ಮಹತ್ಯೆಗೆ ಯತ್ನ,ಪರಿಸ್ಥಿತಿ ಶಾಂತ

Update: 2016-07-22 18:53 IST

ಅಹ್ಮದಾಬಾದ್,ಜು.22: ಗುಜರಾತ್‌ನ ಬೋಟಾದ್ ಜಿಲ್ಲೆಯಲ್ಲಿ ಶುಕ್ರವಾರ ಇನ್ನೂ ಮೂವರು ದಲಿತ ಯುವಕರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಇದೇ ವೇಳೆ ರಾಜ್ಯದ ಹೆಚ್ಚಿನ ಭಾಗಗಳು ಸಹಜ ಸ್ಥಿತಿಗೆ ಮರಳಿವೆ. ಗಿರ್ ಸೋಮನಾಥ ಜಿಲ್ಲೆಯ ಉನಾದಲ್ಲಿ ಸತ್ತ ದನವೊಂದರ ಚರ್ಮವನ್ನು ಸುಲಿದಿದ್ದಕ್ಕಾಗಿ ದಲಿತ ಯುವಕರ ಮೇಲೆ ನಡೆದಿದ್ದ ಅಮಾನವೀಯ ಹಲ್ಲೆಯನ್ನು ವಿರೋಧಿಸಿ ಸಮುದಾಯದ ಹಿಂಸಾತ್ಮಕ ಪ್ರತಿಭಟನೆಗೆ ಗುಜರಾತ್ ಕಳೆದ ಮೂರು ದಿನಗಳಿಂದಲೂ ಸಾಕ್ಷಿಯಾಗಿತ್ತು.
ಉನಾ ಘಟನೆಯನ್ನು ಪ್ರತಿಭಟಿಸಿ ಬೋಟಾದ್ ಜಿಲ್ಲೆಯ ರಣಪುರ ಗ್ರಾಮದಲ್ಲಿ ಮೂವರು ಯುವಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಭಾವನಗರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಎಸ್‌ಪಿ ಸರೋಜ ಕುಮಾರಿ ತಿಳಿಸಿದರು.
ಈವರೆಗಿನ ಪ್ರತಿಭಟನೆಯಲ್ಲಿ 20ಕ್ಕೂ ಅಧಿಕ ದಲಿತ ಯುವಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶುಕ್ರವಾರ ವಡೋದರಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ವಾಹನಗಳ ಸಂಚಾರಕ್ಕೆ ತಡೆಯನ್ನೊಡ್ಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಚಾರವನ್ನು ಸುಗಮಗೊಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಹ್ಮದಾಬಾದ್ ಜಿಲ್ಲೆಯ ಕೆಲವೆಡೆಗಳಲ್ಲಿ ಮತ್ತು ಪಟನ್‌ನಲ್ಲಿ ಪ್ರತಿಭಟನಾ ರ್ಯಾಲಿಗಳು ನಡೆದಿವೆ.
ಪ್ರತಿಭಟನೆ ಸಂದರ್ಭ ದಲಿತರಿಂದ ತಮ್ಮ ಅಂಗಡಿ-ಮಳಿಗೆಗಳಿಗೆ ಹಾನಿಯನ್ನು ಖಂಡಿಸಿ ಸ್ಥಳೀಯ ವ್ಯಾಪಾರಿಗಳು ಪ್ರತಿಭಟನೆಗಿಳಿದಿದ್ದರಿಂದ ಅರ್ವಾಲಿ ಜಿಲ್ಲೆಯ ಮೋಡಸಾದಲ್ಲಿ ಎರಡನೆಯ ದಿನವೂ ಮಾರುಕಟ್ಟೆ ಬಂದ್ ಆಗಿತ್ತು.
ದಲಿತ ಯುವಕರ ಮೇಲೆ ಹಲ್ಲೆ ನಡೆದ ಉನಾದ ಮೋಟಾ ಸಮಾಧಿಯಾಲಾ ಗ್ರಾಮದಲ್ಲಿ ಜು.31ರವರೆಗೆ ಸೆಕ್ಷನ್ 144ರನ್ವಯ ನಿಷೇಧಾಜ್ಞೆಯನ್ನು ಹೇರಲಾಗಿದೆ.
ಸ್ವಘೋಷಿತ ಗೋರಕ್ಷಕರಿಂದ ದಲಿತ ಯುವಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 16 ಜನರನ್ನು ಬಂಧಿಸಲಾಗಿದೆ ಮತ್ತು ಕರ್ತವ್ಯಚ್ಯುತಿ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News