ಉಪ್ಪಿನಂಗಡಿ: ಸರಕಾರಿ ಕಾಲೇಜಿಗೆ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಅಧೀಕ್ಷಕ ಭೇಟಿ
ಉಪ್ಪಿನಂಗಡಿ, ಜು.22: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲವೊಂದು ಅಧ್ಯಯನ ವಿಭಾಗಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಪಾಲಸ್ವಾಮಿ ಹಾಗೂ ಅಧೀಕ್ಷಕ ಸುಮಕಾರ್ಯ ಶುಕ್ರವಾರ ಉಪ್ಪಿನಂಗಡಿ ಕಾಲೇಜಿಗೆ ಆಗಮಿಸಿ, ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪ್ರಾಚಾರ್ಯರೊಂದಿಗೆ ಸಭೆ ನಡೆಸಿ ಚರ್ಚಿಸಿದರಲ್ಲದೆ, ಕಾಲೇಜಿನ ಪ್ರಾಚಾರ್ಯೆ ಮೇರಿ ಬಿ.ಸಿ. ಅವರಿಗೆ ಕೆಲವೊಂದು ನಿರ್ದೇಶನಗಳನ್ನು ನೀಡಿದರು.
ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಬಾರಿ ಕೆಪಿಎಸ್, ಪಿಎಂಸಿ, ಸಿಬಿಝೆಡ್, ಬಿಎಸ್‌ಡಬ್ಲೂ ಹಾಗೂ ಪಿಎಂಇ ತರಗತಿಗೆ ಸೇರ್ಪಡೆಗೆ ಬರುವ ವಿದ್ಯಾರ್ಥಿಗಳಿಗೆ ಆ ಅಧ್ಯಯನ ವಿಷಯಗಳಿಗೆ ಪ್ರವೇಶ ನಿರಾಕರಿಸಿ, ಆ ಅಧ್ಯಯನ ವಿಭಾಗಗಳನ್ನು ಮುಚ್ಚಲಾಗಿದೆ. ಅದು ಈಗ ಇಲ್ಲಿ ಇಲ್ಲ ಎಂದು ಹೇಳಿ ಎಚ್‌ಇಪಿ, ಎಚ್‌ಇಎಸ್, ಪಿಎಂಸಿ ಮೊದಲಾದ ಅಧ್ಯಯನ ವಿಬಾಗಕ್ಕೆ ಸೇರ್ಪಡೆಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ಪ್ರವೇಶ ನೀಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ, ಕಾಲೇಜಿಗೆ ದೊರಕಿರುವ ಅಧ್ಯಯನ ವಿಬಾಗಗಳು ಒಂದು ವರ್ಷ ರದ್ದುಗೊಂಡರೆ, ಮುಂದೆ ಶಾಶ್ವತವಾಗಿ ರದ್ದುಗೊಳ್ಳುವ ಸಾಧ್ಯತೆಯ ಬಗ್ಗೆಯೂ ಆತಂಕ ಎದುರಾಗಿತ್ತು. ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಕಾಲೇಜಿಗೆ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಪಾಲಸ್ವಾಮಿ ಹಾಗೂ ಅಧೀಕ್ಷಕ ಸುಮಕಾರ್ಯ ಅವರು ಈ ಬಗ್ಗೆ ಪ್ರಾಚಾರ್ಯರೊಂದಿಗೆ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಮಾತನಾಡಿದ ಪಾಲಸ್ವಾಮಿ, ಕಾಲೇಜಿನಲ್ಲಿರುವ ಅಧ್ಯಯನ ವಿಭಾಗಗಳು ರದ್ದುಗೊಂಡರೆ ಮತ್ತೆ ಅದನ್ನು ವಾಪಸ್ ತರುವುದು ತುಂಬಾ ಕಷ್ಟವಿದೆ. ಆದ್ದರಿಂದ ಈಗಿರುವ ಅಧ್ಯಯನ ವಿಭಾಗಗಳನ್ನು ಉಳಿಸಲು ಪ್ರಯತ್ನಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆಯಿದ್ದು, ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಅಧ್ಯಯನ ವಿಷಯಗಳ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ಅವರ ಮನವೊಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಬಾರಿ ಕೆಪಿಎಸ್ ಅಧ್ಯಯನ ವಿಭಾಗ ನಡೆಯಲು 11 ವಿದ್ಯಾರ್ಥಿಗಳ ಅವಶ್ಯಕತೆಯಿದ್ದು, ಈ ಬಾರಿ ಮೂವರು ವಿದ್ಯಾರ್ಥಿಗಳು ಮಾತ್ರ ಕೆಪಿಎಸ್‌ಗೆ ಸೇರಲು ಒಲವು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಎಚ್‌ಇಪಿ ಹಾಗೂ ಎಚ್‌ಇಎಸ್ ಅಧ್ಯಯನ ವಿಬಾಗಗಳಲ್ಲಿರುವ ಮಕ್ಕಳ ಮನವೊಲಿಸಿ, ಕೆಲವರಾದರೂ ಕೆಪಿಎಸ್‌ಗೆ ಸೇರ್ಪಡೆಯಾಗುವಂತೆ ಮಾಡಿ. ಅಲ್ಲದೇ, ಮರು ಪರೀಕ್ಷೆಯಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳು ಇನ್ನು ಬರುವವರಿದ್ದರೆ, ಅವರಿಗೂ ಕೆಪಿಎಸ್‌ನ ಅನುಕೂಲತೆಗಳ ಬಗ್ಗೆ ತಿಳಿಸಿ, ಅವರು ಕೆಪಿಎಸ್‌ಗೆ ಸೇರುವಂತೆ ಮಾಡಿ. ಬಿಬಿಎಂಗೆ ಇನ್ನು ಮೂವರು ವಿದ್ಯಾರ್ಥಿಗಳ ಅವಶ್ಯಕತೆಯಿದ್ದು, ಮರು ಪರೀಕ್ಷೆ ಬರೆದು ಬರುವವರಿಗೆ ಬಿಬಿಎಂನಲ್ಲಿ ಅವಕಾಶ ನೀಡಿ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯೆ ಮೇರಿ ಬಿ.ಸಿ. ಮಾತನಾಡಿ, ನಾನು ಯಾರಿಗೂ ಅಧ್ಯಯನ ವಿಭಾಗಗಳನ್ನು ಮುಚ್ಚಿದ್ದೇವೆ. ಅದಕ್ಕೆ ಸೇರಬೇಡಿ ಎಂದಿಲ್ಲ. ಯಾರು ಕೂಡಾ ಆಸಕ್ತಿಯಿಂದ ಕೆಲವೊಂದು ಅಧ್ಯಯನ ವಿಭಾಗಕ್ಕೆ ಸೇರಿಲ್ಲ. ಹಾಗಾಗಿ ಕೆಲವು ಅಧ್ಯಯನ ವಿಭಾಗಗಳು ಮುಚ್ಚುವ ಹಂತದಲ್ಲಿದೆ ಎಂದರು.
ಈ ಸಂದರ್ಭ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಇಲ್ಲಿನ ಪ್ರಾಚಾರ್ಯರ ಸಿಡಿಸಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇಲ್ಲಿನ ಆಗುಹೋಗುಗಳ ಬಗ್ಗೆ ನಮಗೆ ಮಾಹಿತಿಯೇ ನೀಡುವುದಿಲ್ಲ. ಸದಸ್ಯರ ಮೀಟಿಂಗ್ ಕೂಡಾ ಕರೆಯುತ್ತಿಲ್ಲ. ಈ ವಿಷಯ ಕೂಡಾ ಪತ್ರಿಕೆಯ ಮೂಲಕ ನಮ್ಮ ಗಮನಕ್ಕೆ ಬಂದಿದೆ ಎಂದು ನೇರವಾಗಿ ಆರೋಪಿಸಿದರಲ್ಲದೆ, ಕಾಲೇಜಿನಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತನ್ನಿ. ಅದನ್ನು ಪರಿಹರಿಸಲು ಹಾಗೂ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ಸಹಕಾರ ನೀಡಲು ನಾವು ಸದಾ ಸಿದ್ಧರಿದ್ದೇವೆ. ಅಧ್ಯಯನ ವಿಬಾಗಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚದಂತೆ ವಿದ್ಯಾರ್ಥಿಗಳ ಮನವೊಲಿಕೆಯನ್ನು ಬೇಕಾದರೂ ನಾವು ಮಾಡುತ್ತೇವೆ ಎಂದರು.
ಬಳಿಕ ಪಾಲಸ್ವಾಮಿ ಮಾತನಾಡಿ, ಕನಿಷ್ಠ ಎರಡು ತಿಂಗಳಿಗೊಮ್ಮೆ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ)ಯ ಸಬೆ ಕರೆಯಬೇಕೆಂಬ ನಿಯಮವಿದೆ. ಆದರೆ ಅದು ಇಲ್ಲಿ ಪಾಲನೆಯಾಗುತ್ತಿಲ್ಲ. ಇನ್ನು ಮುಂದೆ ಕನಿಷ್ಠ ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಿಡಿಸಿ ಸದಸ್ಯರ ಸಬೆ ಕರೆಯಬೇಕು ಎಂದು ಪ್ರಾಚಾರ್ಯರಿಗೆ ಸೂಚಿಸಿದರಲ್ಲದೆ, ಪದವಿ ಕಾಲೇಜುಗಳಿಗಾಗಿ 2,160 ಉಪನ್ಯಾಸಕರ ನೇಮಕಾತಿ ನಡೆದಿದ್ದು, ಕೊನೆಯ ಹಂತದ ಪ್ರಕ್ರಿಯೆ ಮಾತ್ರ ಬಾಕಿಯಿದೆ. ಗ್ರಾಮಾಂತರ ಪ್ರದೇಶಗಳ ಕಾಲೇಜುಗಳು ಸಿ ವಿಬಾಗಗಳಲ್ಲಿ ಬರುತ್ತಿದ್ದು, ಉಪನ್ಯಾಸಕರ ಹುದ್ದೆ ತುಂಬಲು ಇಂತಹ ಕಾಲೇಜುಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಹಾಗಾಗಿ ಸಿ ವಿಬಾಗದಲ್ಲಿ ಬರುವ ಉಪ್ಪಿನಂಗಡಿ ಪದವಿ ಕಾಲೇಜಿಗೆ ಖಾಲಿಯಿರುವ ಎಲ್ಲಾ ಉಪನ್ಯಾಸಕರ ಹುದ್ದೆ ಸದ್ಯದಲ್ಲಿಯೇ ಭರ್ತಿಯಾಗಲಿದೆ ಎಂದರು.
ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಘುನಾಥ ರೈ ಅಲಿಮಾರ್, ಸದಸ್ಯರಾದ ಅಶ್ರಫ್ ಬಸ್ತಿಕಾರ್, ಅಬ್ದುರ್ರಹ್ಮಾನ್ ಕೆ., ಸುಂದರೇಶ್ ಅತ್ತಾಜೆ, ಮಾಣಿಕ್ಯರಾಜ್ ಪಡಿವಾಳ್, ಹನೀಪ್ ನೆಕ್ಕಿಲಾಡಿ ಇದ್ದರು.
ಜು.25ರಂದು ಕೌನ್ಸೆಲಿಂಗ್
ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಅಧ್ಯಯನ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸೇರ್ಪಡೆಯಾಗುವಂತಾಗಲು ಕಾಲೇಜು ಅಭಿವೃದ್ಧಿ ಸಮಿತಿಯ ಇಬ್ಬರು ಸದಸ್ಯರ ಸಮಕ್ಷಮದಲ್ಲಿ ಜು.25ರಂದು ಕೌನ್ಸೆಲಿಂಗ್ ಮೂಲಕ ವಿದ್ಯಾರ್ಥಿಗಳ ಮನವೊಲಿಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯೆ ಮೇರಿ ಬಿ.ಸಿ. ಈ ಸಂದಭರ್ ತಿಳಿಸಿದರು.