ಆಳ್ವಾಸ್‌ನಲ್ಲಿ ಸಾಹಿತ್ಯ ಸಂಘ ಉದ್ಘಾಟನೆ
ಮೂಡುಬಿದಿರೆ,ಜು.22: ಅಂತರಂಗ ಬೆಳಗಿಸುವ ಬೆಳಕು ಸಾಹಿತ್ಯ: ಪ್ರೊ. ಭುವನೇಶ್ವರಿ ಹೆಗ್ಡೆ ಮೂಡುಬಿದಿರೆ: ಅಂಕಗಳಿಕೆಯೊಂದೇ ಬದುಕಿಗೆ ಪರಿಪೂರ್ಣತೆಯನ್ನು ನೀಡುವುದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಅಂಕುರಿಸುವ ಸಾಹಿತ್ಯ, ಮುಂದಿನ ಜೀವನಕ್ಕೆ ದಾರಿದೀಪ. ಸಾಹಿತ್ಯವು ಮನಸ್ಸಿಗೆ ಶಿಸ್ತಿನ ಚೌಕಟ್ಟನ್ನು ನಿರ್ಮಿಸಿ ಸನ್ಮಾರ್ಗದಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತದೆ ಅಲ್ಲದೆ ನಮ್ಮ ಅಂತರಗಂಗವನ್ನು ಬೆಳಗಿಸುವ ಬೆಳಕಾಗುತ್ತದೆ. ಎಂದು ಸಾಹಿತಿ, ಪ್ರಾಧ್ಯಾಪಕಿ ಪ್ರೊ. ಭುವನೇಶ್ವರಿ ಹೆಗ್ಡೆ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಮಾಹಿತಿ ತಂತ್ರಜ್ಞಾನದಲ್ಲಿ ಸಿಗುವ ಮಾಹಿತಿಗಳಿಗೆ ದಾಸರಾಗುವ ಯುವಜನತೆ ಸಾಹಿತ್ಯದ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದೆ. ನಮ್ಮ ಪ್ರಕೃತಿ ಪರಿಸರದಿಂದ ಸಿಗುವ ಸತ್ವವನ್ನು ಹೀರಿಕೊಂಡು ಅದನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಸಲು ಇಂತಹ ಸಂಘಗಳು ಸಹಕಾರಿಯಾಗುತ್ತವೆ. ವ್ಯವಹಾರಿಕ ಬುದ್ಧಿವಂತಿಕೆಯನ್ನು ಬೆಳೆಸಿಕೊಂಡಾಗ ಮಾತ್ರ ಬದುಕಿನಲ್ಲಿ ಎದುರಾಗುವ ಸ್ಪರ್ಧೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಇದಕ್ಕೆ ಸಾಹಿತ್ಯ ಕಲೆಗಳ ಅಭಿರುಚಿ ಸಹಕಾರಿಯಾಗುತ್ತದೆ ಎಂದು ಎಚ್ಚರಿಸಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್‌ನ ಸಹ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ ವೇದಿಕೆಯಲ್ಲಿದ್ದರು. ಸಾಹಿತ್ಯ ಸಂಘದ ಸಂಚಾಲಕ ಸುಲತಾ ವಿದ್ಯಾಧರ್ ಸ್ವಾಗತಿಸಿದರು. ಉಪನ್ಯಾಸಕ ವಿಕಾಸ್ ಹೆಬ್ಬಾರ್ ವಂದಿಸಿದರು. ಉಪನ್ಯಾಸಕಿ ಶ್ವೇತಾಶ್ರೀ ಕಾರ್ಯಕ್ರಮ ನಿರ್ವಹಿಸಿದರು.