×
Ad

ಅಪಘಾತ ಪ್ರಕರಣದ ಅಪರಾಧಿಗೆ 1 ವರ್ಷ ಸಜೆ

Update: 2016-07-22 21:02 IST

ಮಂಗಳೂರು, ಜು. 22: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಬಡಗುಳಿಪಾಡಿ ಗ್ರಾಮದ ಕೈಕಂಬದಲ್ಲಿ ನಡೆದ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ 2ನೆ ಜೆಎಂಎಫ್‌ಸಿ ನ್ಯಾಯಾಲಯವು ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಮೂಲತಃ ಬೆಂಗಳೂರು ಹಾಗೂ ಪ್ರಸ್ತುತ ಕಿನ್ನಿಕಂಬ್ಳದ ಗುರುಕಂಬ್ಳದ ನಿವಾಸಿಯಾಗಿರುವ ಮುಷ್ತಾಕ್ ಅಹ್ಮದ್ (26) ಎಂಬಾತನೇ ಶಿಕ್ಷೆಗೊಳಗಾದ ಅಪರಾಧಿ. ಅಪರಾಧಿಯು ದಂಡದ ಮೊತ್ತ ಪಾವತಿಸಲು ವಿಫಲನಾದರೆ ಮತ್ತೆ 30 ದಿನ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ.

ಅತಿ ವೇಗ ಹಾಗೂ ನಿರ್ಲಕ್ಷದ ಚಾಲನೆಗೆ 3 ತಿಂಗಳು ಶಿಕ್ಷೆ, 1 ಸಾವಿರ ರೂ. ದಂಡ. ಅಪಘಾತ ನಡೆಸಿ ಸಾವಿಗೆ ಕಾರಣನಾದ ಪ್ರಕರಣದಲ್ಲಿ 1 ವರ್ಷ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ.

2015ರ ಜೂನ್ 22ರಂದು ಸಂಜೆ 5:30ಕ್ಕೆ ಮುಷ್ತಾಕ್ ಚಲಾಯಿಸುತ್ತಿದ್ದ ಕಾರು ಭಟ್ಕಳ ರೈಲ್ವೇ ನಿಲ್ದಾಣದ ಬಳಿಯ ನಿವಾಸಿ ಯೂಸುಫ್ ಸಾಬ್ (58) ಎಂಬವರಿಗೆ ಢಿಕ್ಕಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರು ಅದೇ ದಿನ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಬಜ್ಪೆ ಪೊಲೀಸ್ ಠಾಣೆಯಲ್ಲಿ ಮುಷ್ತಾಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಬಜ್ಪೆಯ ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಲೋಕೇಶ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ನ್ಯಾಯಾಧೀಶ ಸಂತೋಷ್ ಎಸ್.ಕುಂದರ್ ಸಾಕ್ಷಿ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಚೇತನ್ ಟಿ.ನಾಯಕ್ ಸರಕಾರದ ಪರವಾಗಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News