×
Ad

ಏನೆಕಲ್: ಚಿನ್ನಾಭರಣ ಕಳವು ಪ್ರಕರಣ

Update: 2016-07-22 23:46 IST

ಸುಬ್ರಹ್ಮಣ್ಯ, ಜು.22: ಇಲ್ಲಿಗೆ ಸಮೀಪದ ಏನೆಕಲ್ ಗ್ರಾಮದ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಉಳ್ಳಾಕುಲು ಉಳ್ಳಾಲ್ತಿ ಮತ್ತು ಬಚ್ಚನಾಯಕ ದೈವಸ್ಥಾನದ ಚಿನ್ನಾಭರಣ ಕಳವು ಮಾಡಿ ರಾತ್ರೋರಾತ್ರಿ ಪರಾರಿಯಾದ ದೇವಳದ ಅರ್ಚಕ ಮುರಳಿವೆಂಕಟೇಶನನ್ನು ಬೆಂಗಳೂರಿನ ಸಂಬಂಧಿಕರ ಮನೆಯಿಂದ ಶುಕ್ರವಾರ ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.
 ದೇವಳದ ದೇವರಿಗೆ ಹಾಗೂ ದೈವದ ಹರಕೆ ರೂಪದಲ್ಲಿ ಬಂದ ಚಿನ್ನಾಭರಣಗಳನ್ನು ದೇವಳದ ಕಚೇರಿಯ ಸೇಫ್ ಲೋಕರ್‌ನಲ್ಲಿ ಇರಿಸಲಾಗಿತ್ತು. ಅದರ ಮೇಲೆ ಕಣ್ಣಿಟ್ಟಿದ್ದ ಅರ್ಚಕ ದೇವಳದ ಕೀ ದುರುಪಯೋಗಪಡಿಸಿಕೊಂಡು 54.940 ಗ್ರಾಂ ತೂಕದ 32 ಉಂಗುರ ಮತ್ತು 9.950 ಗ್ರಾಂ ತೂಕದ ಒಂದು ಚಿನ್ನದ ಸರ ಸಹಿತ 1,90,000 ರೂ. ಮೌಲ್ಯದ ಸೊತ್ತು ಜತೆ ಬುಧವಾರ ರಾತ್ರಿ ಪರಾರಿಯಾಗಿದ್ದ.
ಕಳ್ಳತನ ನಡೆಸಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆತನ ಬಂಧನಕ್ಕೆ ಬಲೆಬೀಸಿದ್ದರು.
ಶುಕ್ರವಾರ ಮುಂಜಾನೆ ಬಂಧಿಸಲ್ಪಟ್ಟ ಆರೋಪಿಯು ಕಳವುಗೈದ ಚಿನ್ನವನ್ನು ಸುಬ್ರಹ್ಮಣ್ಯದಲ್ಲಿರುವ ಸಹಕಾರಿ ಬ್ಯಾಂಕ್, ಸಹಕಾರಿ ಸೊಸೈಟಿ, ಬೆಳ್ಳಾರೆಯ ಫೈನಾನ್ಸ್‌ವೊಂದರಲ್ಲಿ ಹಾಗೂ ಇನ್ನಿತರ ಬ್ಯಾಂಕ್‌ಗಳಲ್ಲಿ ಚಿನ್ನವನ್ನು ಅಡವಿರಿಸಿ ಹಣಪಡೆದುಕೊಂಡಿರುವುದಾಗಿ ತಿಳಿಸಿದ್ದಾನೆ.
ಸುಳ್ಯ ವೃತ್ತ ನಿರೀಕ್ಷಕ ವಿ. ಕೃಷ್ಣಯ್ಯ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಅಡವಿಟ್ಟ ಬ್ಯಾಂಕ್‌ಗಳಿಗೆ ತೆರಳಿ ಶೋಧ ನಡೆಸಿ ಚಿನ್ನ ಪತ್ತೆ ಹಚ್ಚಿದ್ದಾರೆ.
ಪತ್ತೆಯ ಜಾಡು: ಅರ್ಚಕ ಮುರಳಿ ವೆಂಕಟೇಶ್ ಪತ್ನಿ, ಮಕ್ಕಳೊಂದಿಗೆ ಗುರುವಾರ ಮುಂಜಾನೆ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿಗೆ ಸಾರಿಗೆ ಬಸ್ಸಿನಲ್ಲಿ ತೆರಳಿ ಅಲ್ಲಿಂದ ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿದ್ದ. ಪೊಲೀಸರು ಅರ್ಚಕನ ಮಾವನಲ್ಲಿ ವಿಚಾರಿಸಿದಾಗ ಬೆಂಗಳೂರಿನ ಸಂಬಂಧಿಕರು ತಮ್ಮ ಮನೆಯಲ್ಲಿರುವುದಾಗಿ ದೂರವಾಣಿ ಮೂಲಕ ತನಗೆ ತಿಳಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಿದ ಮೇರೆಗೆ ತಕ್ಷಣ ವೃತ್ತ ನಿರೀಕ್ಷಕ ವಿ.ಕೃಷ್ಣಯ್ಯರ ನೇತೃತ್ವದ ತಂಡ ಗುರುವಾರ ರಾತ್ರಿಯೇ ಬೆಂಗಳೂರಿಗೆ ತೆರಳಿ ಶುಕ್ರವಾರ ಮುಂಜಾನೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News