×
Ad

ಹೈಟೆಕ್ ವೇಶ್ಯಾವಾಟಿಕೆ: ಆರೋಪಿ ಸೆರೆ

Update: 2016-07-22 23:49 IST

ಮಂಗಳೂರು, ಜು. 22: ಅಂತರ್‌ಜಾಲದ ಮೂಲಕ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವೊಂದನ್ನು ಇನ್‌ಸ್ಪೆಕ್ಟರ್ ಕಲಾವತಿ ನೇತೃತ್ವದ ಮಹಿಳಾ ಪೊಲೀಸ್ ತಂಡ ಭೇದಿಸಿ ಓರ್ವನನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ಬೆಂಗಳೂರಿನ ಕಾಡುಗೋಡಿ ನಿವಾಸಿ ಶಬರಿ ಯಾನೆ ವಿಕ್ರಮ್ (26) ಬಂಧಿತ ಆರೋಪಿ.
ಜು.21ರಂದು ಹಂಪನಕಟ್ಟೆ ಬಸ್ ನಿಲ್ದಾಣ ಬಳಿಯ ಲಾಡ್ಜ್‌ವೊಂದರ ಒಂದನೆ ಮಹಡಿಯಲ್ಲಿರುವ ರೂಂ. ನಂಬ್ರ 103ರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಹಿಳಾ ಠಾಣಾ ಇನ್‌ಸ್ಪೆಕ್ಟರ್ ಕಲಾವತಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತು.
ಲಾಡ್ಜ್‌ನಲ್ಲಿ ಸೆರೆ ಸಿಕ್ಕ ಆರೋಪಿ ವಿಕ್ರಮ್‌ನನ್ನು ವಿಚಾರಿಸಿದಾಗ ತಾನು ‘ಲೊಕ್ಯಾಂಟೊ’ ಎಂಬ ವೆಬ್‌ಸೈಟ್‌ನಲ್ಲಿ ಹುಡುಗಿಯರ ಬಗ್ಗೆ ಮಾಹಿತಿ ಹಾಕಿ ಗ್ರಾಹಕರನ್ನು ಆಕರ್ಷಿಸುವ ಮೂಲಕ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ವೇಶ್ಯಾವೃತ್ತಿ ನಡೆಸುತ್ತಿರುವುದಾಗಿ ತಿಳಿಸಿದ್ದಾನೆ.
ವಿಕ್ರಮ್ ಕೆಲವು ವರ್ಷಗಳಿಂದ ಕೆಟರಿಂಗ್ ಕೆಲಸ ಮಾಡಿಕೊಂಡಿದ್ದು, ಎರಡು ವರ್ಷಗಳಿಂದ ಬೆಂಗಳೂರು ಹಾಗೂ ಮಂಗಳೂರು ಮತ್ತಿತರ ಕಡೆಗಳಲ್ಲಿ ಯುವತಿಯರನ್ನು ತನ್ನ ಜಾಲಕ್ಕೆ ಸೆಳೆದು ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ. ಈ ಪ್ರಕರಣದಲ್ಲಿ ಈತನೊಂದಿಗೆ ಮಂಜುನಾಥ್ ಯಾನೆ ಮಂಜು ಎಂಬಾತ ಪ್ರಮುಖ ಪಾತ್ರ ವಹಿಸಿದ್ದು, ಇತರ ಇಬ್ಬರು ಮಹಿಳೆಯರೂ ಶಾಮೀಲಾಗಿದ್ದಾರೆ. ಇವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಕಮಿಷನರ್ ಚಂದ್ರಶೇಖರ್ ತಿಳಿಸಿದರು.
ವಿಕ್ರಮ್ ಹಾಗೂ ಮಂಜುನಾಥ್ ತಮ್ಮ ಮೊಬೈಲ್ ಸಂಖ್ಯೆಗಳನ್ನು ‘ಲೊಕ್ಯಾಂಟೊ’ ಎಂಬ ವೆಬ್‌ಸೈಟ್‌ನ ಖಾಸಗಿ ವರ್ಗೀಕೃತ ಜಾಹೀರಾತು ವಿಭಾಗದಲ್ಲಿ ಜಾಹೀರಾತು ಮೂಲಕ ಗ್ರಾಹಕರನ್ನು ವೇಶ್ಯಾವಾಟಿಕೆಗೆ ಆಹ್ವಾನಿಸಿದ್ದು, ‘ಲೊಕ್ಯಾಂಟೊ’ ಕ್ಲಾಸಿಫೈಡ್ಸ್ ವಿರುದ್ಧವೂ ತನಿಖೆ ನಡೆಯುತ್ತಿದ್ದು, ಸೈಬರ್ ಅಪರಾಧಗಳ ತಜ್ಞರ ನೆರವನ್ನು ಕೋರಲಾಗಿದೆ ಎಂದು ಚಂದ್ರಶೇಖರ್ ತಿಳಿಸಿದರು.
ಡಿಸಿಪಿಗಳಾದ ಶಾಂತಾರಾಂ, ಡಾ.ಸಂಜೀವ ಪಾಟೀಲ್ ಮತ್ತು ಎಸಿಪಿ ಉದಯ್ ನಾಯಕ್ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ತಂಡಕ್ಕೆ ಬಹುಮಾನ: ಕಾರ್ಯಾಚರಣೆಯ ನೇತೃತ್ವ ವಹಿಸಿದ ಮಹಿಳಾ ಠಾಣಾ ಇನ್‌ಸ್ಪೆಕ್ಟರ್ ಕಲಾವತಿಗೆ 2,000 ರೂ. ನಗದು ಹಾಗೂ ಪ್ರಶಂಸಾ ಪತ್ರ ಮತ್ತು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡ ಎಎಸ್ಸೈ ಪೂರ್ಣಿಮಾ, ಸಿಬ್ಬಂದಿಗೆ ತಲಾ 1500 ನಗದು ಮತ್ತು ಪ್ರಶಂಸ ಪತ್ರವನ್ನು ನೀಡಿ ಪುರಸ್ಕರಿಸುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News