ಕೈದಿಗಳಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ: ನ್ಯಾಯಾಧೀಶೆ ಲತಾ
ಉಡುಪಿ: ಕಾರಾಗೃಹದಲ್ಲಿ ಕೈದಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
ಉಡುಪಿ, ಜು.22: ಕೈದಿಗಳಿಗೂ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕಿದೆ. ಕೈದಿಗಳನ್ನು ಸಮಾಜದಲ್ಲಿ ಪ್ರತ್ಯೇಕವಾಗಿ ನೋಡಬಾರದು. ಕೈದಿಗಳು ಪರಿಸ್ಥಿತಿಯ ಕೈಗೊಂಬೆಯಾಗಿ ಮಾಡಿದ ತಪ್ಪನ್ನು ಅರಿತು ಸಮಾಜದಲ್ಲಿ ಗೌರವಯುತ ವ್ಯಕ್ತಿಗಳಾಗಿ ಬಾಳಿ ಬದುಕಿದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಅಭಿಪ್ರಾಯಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಭಿಯೋಜನಾ ಇಲಾಖೆ, ಜಿಲ್ಲಾ ಕಾರಾಗೃಹ, ವಕೀಲರ ಸಂಘ ಉಡುಪಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ನಡೆದ ಕೈದಿಗಳ ಹಕ್ಕುಗಳ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಹಾಜರಿದ್ದ ಕಿರಿಯ ಕಾನೂನು ಅಧಿಕಾರಿ ಜ್ಯೋತಿ ನಾಯಕ್, ಭಾರತೀಯ ಸಂವಿಧಾನದ ಅನುಚ್ಛೇದ-21ರಲ್ಲಿ ಕೈದಿಗಳಿಗಾಗಿ ಮೀಸಲಿಟ್ಟ ಹಕ್ಕುಗಳ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ಅಖಿಲ್ ಹೆಗ್ಡೆ ಮಾತನಾಡಿ, ಕೈದಿಗಳಿಗೆ ಜೈಲಿನಲ್ಲಿ ಪುಸ್ತಕ ಬರೆಯುವ, ಪ್ರಕಟಿಸುವ, ತಮ್ಮ ಸಂಬಂಧಿಕರಿಗೆ ಪತ್ರ ಬರೆಯುವ, ಅವರನ್ನು ಭೇಟಿ ಮಾಡುವ, ತಮ್ಮ ಪರವಾಗಿ ವಾದ ಮಾಡಲು ವಕೀಲರನ್ನು ನೇಮಕ ಮಾಡಿಕೊಳ್ಳುವ ಹಾಗೂ ಅವರೊಂದಿಗೆ ಚರ್ಚಿಸುವ, ಆರ್ಥಿಕ ಅಡಚಣೆಯಿದ್ದಲ್ಲಿ ಉಚಿತ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯುವ ಅನುಕೂಲಗಳಿವೆ ಎಂದರು.
ಕಾರಾಗೃಹದ ಅಧೀಕ್ಷಕ ಶಿವಕುಮಾರ್ ಎನ್.ಎಸ್.ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ದಯಾನಂದ ಕೆ, ವಕೀಲ ಸಿಸ್ಟರ್ ಸಿಲೈನ್ ಮಾನ್ಯುವೆಲ್ ಉಪಸ್ಥಿತರಿದ್ದರು. ಕಾರಾಗೃಹದ ಸಿಬ್ಬಂದಿ ಗಂಗರಾಜು ಸ್ವಾಗತಿಸಿದರು. ಸಕ್ಕೂಬಾಯಿ ನಿರೂಪಿಸಿದರು.