ಮ್ಯೂನಿಕ್ : ಶಾಪಿಂಗ್ ಮಾಲ್ ನಲ್ಲಿ ವ್ಯಕ್ತಿಯಿಂದ ಗುಂಡಿನ ದಾಳಿ

Update: 2016-07-23 04:51 GMT

ಮ್ಯೂನಿಕ್, ಜು.23: ಜನದಟ್ಟಣೆಯ ಶಾಪಿಂಗ್ ಮಾಲ್ ಮತ್ತು ಪಕ್ಕದ ಮೆಕ್‌ಡೊನಾಲ್ಡ್ ಮಳಿಗೆಯಲ್ಲಿ ಬಂದೂಕುಧಾರಿಯೊಬ್ಬ ಗುಂಡುಹಾರಿಸಿ ಒಂಬತ್ತು ಮಂದಿಯನ್ನು ಸಾಯಿಸಿದ್ದಾನೆ. ಘಟನೆಯಲ್ಲಿ ಇತರ ಹತ್ತು ಮಂದಿ ಗಾಯಗೊಂಡಿದ್ದಾರೆ. ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ದಾಳಿಕೋರನನ್ನು ಹತ್ತಿಕ್ಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದು ಭಯೋತ್ಪಾದನಾ ಕೃತ್ಯ ಎಂದು ಪೊಲೀಸರು ಪ್ರಕಟಿಸಿದ್ದಾರೆ.

ಕಾರ್ಯಾಚರಣೆ ಬಳಿಕ ಒಬ್ಬ ದಾಳಿಕೋರನ ಶವ ಪತ್ತೆಯಾಗಿದ್ದು, ಆತ ಮಾತ್ರ ಈ ಕೃತ್ಯ ಎಸಗಿದ್ದಾಗಿ ಪೊಲೀಸರು ಹೇಳಿದ್ದಾರೆ. ದಾಳಿಕೋರ 18 ವರ್ಷದವನಾಗಿದ್ದು, ಜರ್ಮನ್- ಇರಾನಿಯನ್ ಎಂದು ಪೊಲೀಸ್ ಮುಖ್ಯಸ್ಥ ಹ್ಯುಬೆರ್ಟಸಸ್ ಆಂಡ್ರೆ ಹೇಳಿದ್ದಾರೆ. ದಾಳಿಕೋರನ ಉದ್ದೇಶ ತಿಳಿದುಬಂದಿಲ್ಲ.
ಒಲಿಂಪಿಯಾ ಐನ್‌ಕೌಸೆಂಟ್ರವ್ ಮಾಲ್‌ನ ಬಳಿ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ನೋಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ದಾಳಿಕೋರನನ್ನು ಪತ್ತೆ ಮಾಡುವ ಕಾರ್ಯಾಚರಣೆ ವೇಳೆ ಒಬ್ಬ ವ್ಯಕ್ತಿ ತಾನೇ ಗುಂಡು ಹೊಡೆದುಕೊಂಡಿದ್ದಾನೆ. ಆತನೊಬ್ಬನೇ ದಾಳಿ ಎಸಗಿರಬೇಕು ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮ್ಯೂನಿಕ್‌ನ ಅತಿದೊಡ್ಡ ಮಾಲ್‌ನಲ್ಲಿ ಈ ದಾಳಿ ನಡೆದ ತಕ್ಷಣ ನಗರದಲ್ಲಿ ಸ್ಮಾರ್ಟ್‌ಫೋನ್ ಸಂದೇಶವನ್ನು ಎಲ್ಲ ನಾಗರಿಕರಿಗೂ ಕಳುಹಿಸಿ ತುರ್ತು ಪರಿಸ್ಥಿತಿ ಎಂದು ಘೋಷಿಸಲಾಗಿತ್ತು. ಜನರು ಮನೆಗಳ ಒಳಗೇ ಉಳಿಯುವಂತೆ ಸೂಚಿಸಲಾಗಿತ್ತು. ಎಲ್ಲ ರೈಲು, ಸಬ್‌ವೇ ಹಾಗೂ ಟ್ರಾಲಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News