ದಲಿತ ದೌರ್ಜನ್ಯದ ವಿರುದ್ಧ ಜಿಲ್ಲಾದ್ಯಂತ ಹೋರಾಟ: ಎಸ್‌ಡಿಪಿಐ
ಮಂಗಳೂರು, ಜು.23: ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ, ಮಹಾರಾಷ್ಟ್ರದಲ್ಲಿ ಅಂಬೇಡ್ಕರ್‌ರ ಪ್ರತಿಮೆಯ ಧ್ವಂಸ ಮತ್ತು ಬಿಎಸ್ಪಿಯ ಅಧಿನಾಯಕಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯ ಬಗ್ಗೆ ಬಿಜೆಪಿಯ ಉತ್ತರಪ್ರದೇಶದ ಮಾಜಿ ಉಪಾಧ್ಯಕ್ಷರ ಅವಹೇಳನಕಾರಿ ಹೇಳಿಕೆಯನ್ನು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಖಂಡಿಸಿದೆ.
ಎಸ್‌ಡಿಪಿಐ ಜಿಲ್ಲಾ ಸಮಿತಿ ಸಭೆಯಲ್ಲಿ ದೇಶಾದ್ಯಂತ ದಲಿತರ ಮೇಲಾಗುವ ದಾಳಿ ಮತ್ತು ದೌರ್ಜನ್ಯವನ್ನು ಖಂಡಿಸಿ ಮಾಯಾವತಿಯವರಿಗೆ ಬೆಂಬಲ ಸೂಚಿಸಿ ಜಿಲ್ಲಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಬಿಜೆಪಿಯು ಕೇಂದ್ರದಲ್ಲಿ ಆಡಳಿತವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದು, ಬಿಜೆಪಿಯ ನಾಯಕರುಗಳು ದಿಕ್ಕು ತೋಚದಂತಾಗಿ ದೇಶದ ಮುಸ್ಲಿಮರ, ದಲಿತರ ಹಾಗೂ ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸಿ ಸಂವಿಧಾನವನ್ನು ಉಲ್ಲಂಘಿಸಿ ಮನಬಂದಂತೆ ಹೇಳಿಕೆಯನ್ನು ಕೊಟ್ಟು ಜಾತಿಗಳ ಮತ್ತು ಧರ್ಮಗಳ ಮಧ್ಯೆ ವೈರುಧ್ಯವನ್ನು ಉಂಟುಮಾಡುತ್ತಿದ್ದಾರೆ. ಬಿಜೆಪಿಗೆ ಕೋಮುವಾದ ಬಿಟ್ಟರೆ ಚುನಾವಣೆಯನ್ನು ಗೆಲ್ಲಲು ಯಾವುದೇ ಅಜೆಂಡಾ ಇಲ್ಲದಂತಾಗಿದೆ. ದೇಶದ ಸಂವಿಧಾನ ಮತ್ತು ಜಾತ್ಯಾತೀತ ಸಿದ್ದಾಂತದ ಮೇಲೆ ವಿಶ್ವಾಸ ಇಟ್ಟಿರುವ ಎಲ್ಲಾ ನಾಗರಿಕರು ನ್ಯಾಯಯುತ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.