ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿಗೆ 205 ಕೋಟಿ ರೂ. ಬಿಡುಗಡೆ: ಸಚಿವ ರಮಾನಾಥ್ ರೈ

Update: 2016-07-23 10:36 GMT

ಬಂಟ್ವಾಳ, ಜು.23: ಕೇಂದ್ರಕ್ಕೆ ಸಲ್ಲಿಸಿದ ಪ್ರಸ್ತಾವನೆಯಂತೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ರಾಜ್ಯಕ್ಕೆ 3 ಸಾವಿರ ಕೋಟಿ ರೂಪಾಯಿ ಮಂಜೂರುಗೊಂಡಿರುವ ಅನುದಾನದ ಪೈಕಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿಗೆ 205 ಕೋಟಿ ರೂ. ಬಿಡುಗಡೆಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 18.83 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್- ಕಬಕವರೆಗಿನ ರಸ್ತೆ ಅಭಿವೃದ್ಧಿಗೆ ಪೊಳಲಿ ಸಮೀಪದ ಪುಂಚಮೆ ಎಂಬಲ್ಲಿ ಶನಿವಾರ ಶಿಲಾನ್ಯಾಸಗೈದು ಬಳಿಕ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಗೆ 125 ಮತ್ತು ಉಡುಪಿ ಜಿಲ್ಲೆಗೆ 80 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದರು. 2010ರಲ್ಲಿ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷರ ಸಲಹೆಯಂತೆ ತಾನು ಶಾಸಕನಾಗಿದ್ದಾಗ ಕೇಂದ್ರಕ್ಕೆ ಆರ್ಥಿಕ ಅಭಿವೃದ್ಧಿ ಯೋಜನೆಯಡಿ ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದೆ. ಅದರ ಫಲವಾಗಿ ಇಂದು ಈ ಅನುದಾನ ಬಿಡುಗಡೆಗೆ ಸಹಕಾರಿಯಾಗಿದೆ ಎಂದು ನೆನಪಿಸಿಕೊಂಡ ಸಚಿವರು, ಈ ಭಾಗದ ಯಾವುದೇ ಅಭಿವೃದ್ಧಿಯಲ್ಲಿ ತನ್ನ ಪಾತ್ರವಿರುವುದು ತನ್ನ ಹೆಗ್ಗಳಿಕೆಯಾಗಿದೆ ಎಂದು ಹೇಳಿದರು.

ಮಂಜೂರಾಗಿರುವ 18.83 ಕೋಟಿ ರೂಪಾಯಿಯ ಪೈಕಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಪುತ್ತೂರು ವಿಧಾನಸಬಾ ಕ್ಷೇತ್ರಕ್ಕೆ ಒಳಪಟ್ಟ ಸಾಲೆತ್ತೂರು - ವಿಟ್ಲ - ಕಬಕ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಈಗಿರುವ 5.5 ಮೀಟರ್ ಮಧ್ಯಮ ಪಥದ ರಸ್ತೆಯನ್ನು 7 ಮೀಟರ್ ಅಗಲೀಕರಣಗೊಳಿಸಿ ದ್ವಿಪಥವಾಗಿ ಅಭಿವೃದ್ಧಿಪಡಿಸಲಾಗುವುದು. ಕೆಲವು ಭಾಗದಲ್ಲಿ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗುವುದು. ಅಲ್ಲದೆ, 23 ಮೋರಿಗಳನ್ನು ನಿರ್ಮಿಸಲಾಗುತ್ತಿದೆ. ಹಾಗೆಯೇ ರಸ್ತೆ ಸುರಕ್ಷತಾ ಸೂಚನಾ ಫಲಕ, ಎಚ್ಚರಿಕೆ ಫಲಕ, ಕ್ರಾಶ್ ಬ್ಯಾರಿಯರ್‌ಗಳನ್ನು ಅಳವಡಿಸಲಾಗುವುದು ಎಂದು ವಿವರಿಸಿದ ಸಚಿವರು ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಪೊಳಲಿಯ ಚೆಂಡಿನ ಗದ್ದೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು ಎಂದರು.

ಬೆಂಜನಪದವಿನಲ್ಲಿ 1 ಕೋಟಿ ರೂ.ವೆಚ್ಚದ ಸಮುದಾಯ ಭವನ ಪ್ರಗತಿಯಲ್ಲಿದ್ದರೆ, ಬೆಂಜನಪದವಿನಲ್ಲಿ ಈಗಾಗಲೇ ತಾಲೂಕು ಕ್ರೀಡಾಂಗಣಕ್ಕೆ ಗುರುತಿಸಲಾದ ಜಮೀನಿಗೆ ಆವರಣ ಗೋಡೆ ನಿರ್ಮಿಸಲು 50 ಲಕ್ಷ ರೂ. ಮಂಜೂರುಗೊಂಡಿದೆ. ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಬಳಿ ಪಂಜೆಮಂಗೇಶರಾಯ ಭವನ, ತಾ.ಪಂ ಬಳಿ ಅಂಬೇಡ್ಕರ್ ಭವನ ನಿರ್ಮಾಣದ ಕಾರ್ಯವನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದರು.

ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಅಭಿವೃದ್ಧಿ ಕಾರ್ಯದಲ್ಲಿ ಬಂಟ್ವಾಳ ವಿಧಾನ ಸಬಾ ಕ್ಷೇತ್ರ ರಾಜ್ಯದಲ್ಲೇ 2ನೆ ಸ್ಥಾನದಲ್ಲಿದೆ. ಇದಕ್ಕೆ ಸಚಿವ ರಮಾನಾಥ ರೈ ಅವರ ಪರಿಶ್ರಮ, ಸಾಧನೆಯೇ ಕಾರಣ. ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಸಹಕರಿಸಿದಾಗ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

ತಾಪಂ ಸದಸ್ಯ ಯಶವಂತ ಕೋಟ್ಯಾನ್, ಶಿವಪ್ರಸಾದ್, ಮಲ್ಲಿಕಾ ಶೆಟ್ಟಿ, ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಬಡಗಬೆಳ್ಳೂರು ಗ್ರಾಪಂ ಉಪಾಧ್ಯಕ್ಷ ಯೋಗೀಶ್ ಸೂರ್ಲ, ಕಾಂಗ್ರೆಸ್ ಮುಖಂಡ ಬಿ.ಎಚ್.ಖಾದರ್, ಗುತ್ತಿಗೆದಾರ ಇಕ್ಬಾಲ್ ಅಹ್ಮದ್, ಪಿಡಿಒ ನಯನ ಮೊದಲಾದವರು ವೇದಿಕೆಯಲ್ಲಿದ್ದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ ತಾಂತ್ರಿಕ ವರದಿಯನ್ನು ಮಂಡಿಸಿದರು. ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿ, ಪಂಚಾಯತ್ ಸದಸ್ಯೆ ವೀಣಾ ಆಚಾರ್ಯ ವಂದಿಸಿದರು. ಅವಿನಾಶ್ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News