×
Ad

ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಬೆಳ್ತಂಗಡಿಯ ಯೋಧ ಏಕನಾಥ ಶೆಟ್ಟಿಯವರ ಪತ್ನಿ

Update: 2016-07-23 16:19 IST

ಬೆಳ್ತಂಗಡಿ, ಜು.23: ಗುರುವಾಯನಕರೆಯಲ್ಲಿನ ಸೇನಾ ಯೋಧ ಏಕನಾಥ ಶೆಟ್ಟಿ ಅವರ ಮನೆಯಲ್ಲಿ ಈಗ ನೀರವ ಮೌನ ವಾತಾವರಣವಿದೆ. ಜು. 22 ರ ಸಂಜೆ 3 ಗಂಟೆಯಿಂದ ಆತಂಕದ ವಾತಾವರಣವಿದ್ದು ಯೋಧನ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದಿರುವ ಸ್ಥಿತಿ ನಿರ್ಮಾಣವಾಗಿದೆ. ತೀವ್ರ ದುಃಖತಪ್ತರಾಗಿರುವ ಯೋಧನ ಪತ್ನಿ ಜಯಂತಿ ಶನಿವಾರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು ಅವರನ್ನು ಬೆಳ್ತಂಗಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೇನಾ ಮೂಲಗಳು ಚೆನೈಯಿಂದ ಪೋರ್ಟ್‌ಬ್ಲೇರ್‌ಗೆ ಹೋಗುತ್ತಿದ್ದ ವೇಳೆ ನಾಪತ್ತೆಯಾದ ವಾಯುಸೇನೆಯ ಎಎನ್ -32 ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿವಾಸಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕನಾಥ ಶೆಟ್ಟಿ ಇದ್ದರು ಎಂದು ಖಚಿತ ಪಡಿಸಿದ್ದರು.

ಭಾರತೀಯ ಭೂ ಸೇನೆಗೆ ಸೇರ್ಪಡೆಯಾದ ಏಕನಾಥ ಶೆಟ್ಟಿ (48) ಅವರು ಬಳಿಕ ಸುಬೇದಾರ್ ಹುದ್ದೆಯಲ್ಲಿದ್ದರು. ಬಳಿಕ ಅವರು ಎಮ್‌ಆರ್‌ಸಿಗೆ ಸೇರಿಕೊಂಡಿದ್ದರು. 1986ರಲ್ಲಿ ಶ್ರೀಲಂಕಾದಲ್ಲೂ ಇದ್ದರು. ಜಮ್ಮು ಕಾಶ್ಮೀರ, ಅರುಣಾಚಲ, ಪಂಜಾಬ್ ಮೊದಲಾಡೆ ಸೇವೆ ಸಲ್ಲಿಸಿದ್ದರು. 2009 ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ನಿವೃತ್ತರಾದ ಮೂರೇ ತಿಂಗಳಲ್ಲಿ ಅವರು ವಾಯುಸೇನೆಯ ಡಿಫೆನ್ಸ್ ಸೆಕ್ಯೂರಿಟಿ ಫೋರ್ಸ್‌ಗೆ ಸೇರಿಕೊಂಡರು. ಕಣ್ಣೂರು, ಕಾನ್ಪುರ, ಗೋವಾದಲ್ಲಿ ಸೇವೆ ಸಲ್ಲಿಸಿ ಇದೀಗ ಪೋರ್ಟ್‌ಬ್ಲೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2017 ಜನವರಿಯಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗುವವರಿದ್ದರು.

ವಾರಗಳ ಹಿಂದೆ ತಂಗಿಯ ಗೃಹಪ್ರವೇಶದ ನಿಮಿತ್ತ ರಜೆಯಲ್ಲಿ ಬೆಳ್ತಂಗಡಿಗೆ ಬಂದಿದ್ದ ಇವರು ಜು.16 ರಂದು ಮನೆಯಿಂದ ತೆರಳಿದ್ದರು. ಚೆನ್ನೈನಿಂದ ಇದೇ ವಿಮಾನದಲ್ಲಿ ತೆರಳುವುದಾಗಿ ಅವರು ಮೊದಲು ಮನೆಯವರಿಗೆ ತಿಳಿಸಿದ್ದರು. ಆದರೆ ಬಳಿಕ ಅನಾರೋಗ್ಯದ ಕಾರಣದಿಂದ ಹೋಗುವುದಿಲ್ಲ ಎಂದೂ ಹೇಳಿದ್ದರಂತೆ. ಆದರೆ ಬಳಿಕ ಶುಕ್ರವಾರ ಬೆಳಗ್ಗಿನಿಂದ ಇವರ ಬಗ್ಗೆ ಯಾವುದೇ ಮಾಹಿತಿ ಇಲ್ಲವಾಗಿತ್ತು. ಅವರನ್ನು ಸಂಪರ್ಕಿಸಲು ಮನೆಯವರು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಇದಾದ ಬಳಿಕ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಮನೆಗೆ ಭಾರತೀಯ ಸೇನೆಯಿಂದ ಕರೆಯೊಂದು ಬಂದಿದ್ದು ನಾಪತ್ತೆಯಾಗಿರುವ ವಿಮಾನದಲ್ಲಿ ಅವರಿದ್ದರು ಎಂದು ತಿಳಿಸಿದ್ದಾರೆ.

ಏಕನಾಥ ಶೆಟ್ಟಿ ಅವರಿಗೆ ಇಬ್ಬರು ಮಕ್ಕಳು. ಹಿರಿಯವಳು ಆಶಿತಾ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಕಲಿಯುತ್ತಿದ್ದಾಳೆ. ಮಗ ಅಕ್ಷಯ ಉಜಿರೆಯಲ್ಲಿ ಹತ್ತನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಪತ್ನಿ ಉಜಿರೆ ಎಸ್‌ಡಿಎಂ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಶೆಟ್ಟಿಯವರು ಸೇವೆಯಿಂದ ನಿವೃತ್ತರಾಗಲು ಇನ್ನು ಮೂರು ವರ್ಷ ಮಾತ್ರ ಇತ್ತು ಎನ್ನಲಾಗಿದೆ.

ಇವರು ಮೂಲತಃ ಮಂಗಳೂರಿನ ನಿವೃತ್ತ ಯೋಧ ದಿ ಕೃಷ್ಣ ಶೆಟ್ಟಿ ಹಾಗೂ ಸುನಂದ ದಂಪತಿ ಐದು ಮಕ್ಕಳಲ್ಲಿ ಮೂರನೆಯವರು. ಮಂಗಳೂರಿನ ಲೇಡಿಹಿಲ್ ಕೆನರಾ ಹೈಸ್ಕೂಲಿನಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿ ಸೇನೆಗೆ ಸೇರ್ಪಡೆಯಾಗಿದ್ದರು.

ಸೈನಿಕನ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶಾಸಕ ಕೆ.ವಸಂತ ಬಂಗೇರ, ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್ ಜಿ. ಗೌಡ, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಕುವೆಟ್ಟು ಗ್ರಾ.ಪಂ.ಅಧ್ಯಕ್ಷ ಅಶೋಕ್ ಕೋಟ್ಯಾನ್ ಸೇರಿದಂತೆ ಹಲವರು ಗಣ್ಯರು ಭೇಟಿ ಮನೆಯವರೊಂದಿಗೆ ಮಾತುಕತೆ ನಡೆಸಿದರು.

ಶಾಸಕ ವಸಂತ ಬಂಗೇರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಶೆಟ್ಟಿಯವರ ಪತ್ನಿಯ ಆರೋಗ್ಯ ವಿಚಾರಿಸಿದ್ದಾರೆ. ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನಮೂರ್ತಿ ಹಾಗೂ ಇತರೆ ಅಧಿಕಾರಿಗಳು ಮನೆಗೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News